ADVERTISEMENT

ರಾಹುಲ್ ರಾವಣ, ಮೋದಿ ಸುಳ್ಳುಗಾರ: ಕಾಂಗ್ರೆಸ್ VS ಬಿಜೆಪಿ ವಾಗ್ಯುದ್ಧ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 11:24 IST
Last Updated 6 ಅಕ್ಟೋಬರ್ 2023, 11:24 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ‘ಜುಮ್ಲಾ ಬಾಯ್‌’ ಹಾಗೂ ದೊಡ್ಡ ಸುಳ್ಳುಗಾರ ಎಂಬ ಪೋಸ್ಟ್ ಅನ್ನು ಎಕ್ಸ್ ವೇದಿಕೆಯಲ್ಲಿ ಕಾಂಗ್ರೆಸ್ ಹಂಚಿಕೊಂಡ ಬೆನ್ನಲ್ಲೇ ರಾಹುಲ್ ಗಾಂಧಿಯನ್ನು ರಾವಣನನ್ನಾಗಿ ಚಿತ್ರಿಸಿದ ಪೋಸ್ಟ್‌ ಒಂದನ್ನು ಬಿಜೆಪಿ ಇದೇ ವೇದಿಕೆಯಲ್ಲಿ ಪ್ರಕಟಿಸಿದೆ. ಆ ಮೂಲಕ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಮೈಕ್ರೊ ಬ್ಲಾಗಿಂಗ್‌ ವೇದಿಕೆ ‘ಎಕ್ಸ್‌’ನಲ್ಲಿ ವಾಗ್ಯುದ್ಧ ನಡೆಸಿವೆ.

ರಾಹುಲ್‌ ಗಾಂಧಿಯನ್ನು ರಾವಣನನ್ನಾಗಿ ಚಿತ್ರಿಸಿ ಪ್ರಕಟಿಸಿದ ಚಿತ್ರ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ನ ಜೈರಾಮ್ ರಮೇಶ್, ‘ಭಾರತವನ್ನು ವಿಭಜಿಸಲು ಹೊರಟಿದ್ದ ಸಂಘಟನೆಗಳ ದುಷ್ಕೃತ್ಯಕ್ಕೆ ಅಜ್ಜಿ ಹಾಗೂ ತಂದೆಯನ್ನು ಕಳೆದುಕೊಂಡ ಕಾಂಗ್ರೆಸ್ ಮುಖಂಡನ ವಿರುದ್ಧದ ಈ ಪೋಸ್ಟ್‌ ಅಹಿಂಸೆಯನ್ನು ಪ್ರಚೋದಿಸುವಂತಿದೆ’ ಎಂದಿದ್ದಾರೆ.

‘ಸುಳ್ಳು ಹೇಳುವ ಸಮಸ್ಯೆ ಹಾಗೂ ತನ್ನನ್ನು ತಾನು ಅತಿಯಾಗಿ ಬಿಂಬಿಸಿಕೊಳ್ಳುವ ನಾರ್ಸಿಸಿಸ್ಟಿಕ್‌ ವ್ಯಕ್ತಿತ್ವ ಹೊಂದಿರುವುದಕ್ಕೆ ನಿತ್ಯವೂ ಪ್ರಧಾನಿ ಹಲವು ಸಾಕ್ಷಗಳನ್ನು ನೀಡುತ್ತಿದ್ದಾರೆ. ತನ್ನ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಅಸಹ್ಯಕರವಾಗಿ ವರ್ತಿಸುತ್ತಿರುವುದು ಸ್ವೀಕಾರಾರ್ಹವೂ ಅಲ್ಲ. ಜತೆಗೆ ಅತ್ಯಂತ ಅಪಾಯಕಾರಿ ಕೂಡಾ’ ಎಂದು ರಮೇಶ್ ಆರೋಪಿಸಿದ್ದಾರೆ.

ADVERTISEMENT

ಬಿಜೆಪಿ ಪ್ರಕಟಿಸಿದ್ದ ರಾಹುಲ್ ಚಿತ್ರಕ್ಕೆ ‘ನವಯುಗದ ರಾವಣ ಇಲ್ಲಿದ್ದಾನೆ. ಆತ ರಾಕ್ಷಸ. ಧರ್ಮ ವಿರೋಧಿ, ರಾಮನ ವಿರೋಧಿ, ಆತನ ಉದ್ದೇಶವೇ ಭಾರತದ ನಾಶ. ಭಾರತ ಅಪಾಯದಲ್ಲಿದೆ. ಕಾಂಗ್ರೆಸ್ ಪಕ್ಷದ ನಿರ್ಮಾಣ, ಜಾರ್ಜ್‌ ಸೊರೊಸ್‌ ನಿರ್ದೇಶನ’ ಎಂಬ ಒಕ್ಕಣೆಯೂ ಇದೆ.

ಇದೇ ವಿಷಯವಾಗಿ ಎಕ್ಸ್ ವೇದಿಕೆಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ, ‘ಗೌರವಾನ್ವಿತ ನರೇಂದ್ರ ಮೋದಿ ಹಾಗೂ ಜೆ.ಪಿ. ನಡ್ಡಾ ಅವರೇ, ರಾಜಕೀಯ ಹಾಗೂ ಚರ್ಚೆಯನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕೆಂದುಕೊಂಡಿದ್ದೀರಿ? ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ಪ್ರಚೋದಿಸುವ ಪೋಸ್ಟ್ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದ್ದಾರೆ.

‘ಪ್ರಮಾಣವಚನ ಸ್ವೀಕರಿಸಿ ಬಹಳ ಸಮಯ ಕಳೆದಿಲ್ಲ. ನೀವು ನೀಡಿದ ಭರವಸೆಗಳನ್ನು ಈಡೇರಿಸುವ ವಾಗ್ದಾನ ಮಾಡಿದ್ದನ್ನು ಮರೆತಿರಾ?’ ಎಂದು ಕೇಳಿದ್ದಾರೆ.

ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್ ಅವರೂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ‘ರಾಹುಲ್ ಗಾಂಧಿ ಅವರ ಚಿತ್ರದ ಗ್ರಾಫಿಕ್ಸ್ ಹಂಚಿಕೊಂಡು ಪ್ರಚೋದಿಸುತ್ತಿರುವ ಬಿಜೆಪಿಯ ನೈಜ ಉದ್ದೇಶ ಬಹಿರಂಗವಾಗಿದೆ. ದೇಶಕ್ಕಾಗಿ ತನ್ನ ಅಜ್ಜಿ ಹಾಗೂ ತಂದೆಯನ್ನು ಕಳೆದುಕೊಂಡ ರಾಹುಲ್ ಅವರನ್ನು ಹತ್ಯೆ ಮಾಡುವ ಉದ್ದೇಶವನ್ನು ಆ ಪಕ್ಷ ಹೊಂದಿರುವುದು ಸ್ಪಷ್ಟ. ರಾಜಕೀಯ ದುರುದ್ದೇಶದಿಂದ ಮೊದಲು ರಾಹುಲ್‌ಗೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆ ಹಿಂಪಡೆಯಲಾಯಿತು. ನಂತರ ಅವರಿಗೆ ನೀಡಲಾಗಿದ್ದ ಮನೆಯನ್ನೂ ತೊರೆಯುವಂತೆ ಮಾಡಲಾಯಿತು. ಬೇರೊಂದು ಮನೆ ಹಂಚಿಕೆ ಮಾಡಬೇಕೆನ್ನುವ ರಾಹುಲ್ ಕೋರಿಕೆಯನ್ನು ಮಾನ್ಯ ಮಾಡಿಲ್ಲ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.