
ನವದೆಹಲಿ: ತಮ್ಮ ಕೃತಿ ‘ಈಗ ಲಭ್ಯ’ ಎಂಬ ಮಾಹಿತಿಯನ್ನು ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು 2023ರ ಡಿಸೆಂಬರ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಈ ಮೂಲಕ ಅವರು, ‘ಜನರಲ್ ನರವಣೆ ಅವರ ಪುಸ್ತಕವನ್ನು ಇನ್ನೂ ಪ್ರಕಟಿಸಿಲ್ಲ’ ಎಂಬ ಪ್ರಕಾಶನ ಸಂಸ್ಥೆ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.
‘ಈ ಕೃತಿಯ ವಿಚಾರದಲ್ಲಿ ನಾನು ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ಸಂಸ್ಥೆಗಿಂತ ಜನರಲ್ ನರವಣೆ ಅವರ ಮಾತನ್ನು ನಂಬುತ್ತೇನೆ’ ಎಂದೂ ಹೇಳಿದ್ದಾರೆ.
ಸಂಸತ್ ಭವನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಹಲೋ ಸ್ನೇಹಿತರೆ, ನನ್ನ ಪುಸ್ತಕ ಈಗ ಲಭ್ಯ ಇದೆ. ಈ ಲಿಂಕ್‌ಗೆ ಭೇಟಿ ನೀಡಿ. ಜೈ ಹಿಂದ್’ ಎಂಬುದಾಗಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ (ಆಗಿನ ಟ್ವಿಟರ್) ನರವಣೆ ಅವರು ಮಾಡಿದ್ದ ಪೋಸ್ಟ್ ಅನ್ನು ಓದಿದರು.
‘ಇದು ನರವಣೆ ಅವರು ಮಾಡಿರುವ ಪೋಸ್ಟ್. ಒಂದೋ ನರವಣೆ ಅವರು ಸುಳ್ಳು ಹೇಳುತ್ತಿರಬೇಕು ಇಲ್ಲವೇ ಪ್ರಕಾಶನ ಸಂಸ್ಥೆ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ಸುಳ್ಳು ಹೇಳುತ್ತಿರಬಹುದು. ಸೇನೆಯ ಮಾಜಿ ಮುಖ್ಯಸ್ಥರು ಸುಳ್ಳು ಹೇಳುವುದಿಲ್ಲ ಎಂಬುದು ನನ್ನ ನಂಬಿಕೆ. ಇಬ್ಬರೂ ಸತ್ಯವನ್ನು ಹೇಳುತ್ತಿರಲಿಕ್ಕಿಲ್ಲ’ ಎಂದರು.
‘ನರವಣೆ ಅವರ ಪುಸ್ತಕವನ್ನು ಪ್ರಕಟಿಸಿಲ್ಲ ಎಂಬುದಾಗಿ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ಹೇಳುತ್ತಿದೆ. ಈ ಪುಸ್ತಕ ಅಮೆಜಾನ್‌ನಲ್ಲಿ ಲಭ್ಯ ಎಂಬುದಾಗಿ ನರವಣೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನೀವು ನರವಣೆ ಬದಲಾಗಿ ಪ್ರಕಾಶನ ಸಂಸ್ಥೆ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾವನ್ನು ನಂಬುತ್ತೀರಾ’ ಎಂದು ಸುದ್ದಿಗಾರರನ್ನು ಪ್ರಶ್ನಿಸಿದ ಅವರು, ‘ನಾನು ನರವಣೆ ಅವರನ್ನು ನಂಬುತ್ತೇನೆ’ ಎಂದು ಪುನರುಚ್ಚರಿಸಿದರು.
ನರವಣೆ ಅವರ ಕೃತಿಯ ಹಸ್ತಪ್ರತಿಗಳು ಡಿಜಿಟಲ್ ಹಾಗೂ ಇತರ ವಿಧಾನಗಳ ಮೂಲಕ ಕಾನೂನುಬಾಹಿರವಾಗಿ ಹಂಚಿಕೆಯಾಗುತ್ತಿವೆ ಎಂಬ ಆರೋಪಗಳು ಕೇಳಿಬಂದ ಕಾರಣ, ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇದರ ಬೆನ್ನಲ್ಲೇ ಸೋಮವಾರ ಸ್ಪಷ್ಟೀಕರಣ ನೀಡಿದ್ದ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ, ಜನರಲ್ ಎಂ.ಎಂ.ನರವಣೆ ಅವರ ಕೃತಿ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪ್ರಕಟಣೆಗೆ ಸಂಬಂಧಿಸಿ ಎಲ್ಲ ಹಕ್ಕುಗಳ ತಾನು ಹೊಂದಿದ್ದು, ಈ ಪುಸ್ತಕ ಇನ್ನೂ ಪ್ರಕಟವಾಗಿಲ್ಲ ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.