ADVERTISEMENT

ನೋಟು ರದ್ದತಿ ಸಂಕಟ ಮರೆಯುವಂತಿಲ್ಲ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಟೀಕೆ

ಪಿಟಿಐ
Published 31 ಮೇ 2022, 11:11 IST
Last Updated 31 ಮೇ 2022, 11:11 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಅಧಿಕ ಮುಖಬೆಲೆಯ ನೋಟುಗಳ ರದ್ದತಿ ನಿರ್ಧಾರವನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.

‘ಸರ್ವಾಧಿಕಾರಿಯ ಆ ನಿರ್ಧಾರದಿಂದ ಜನರಿಗೆ ಇನ್ನಿಲ್ಲದ ಸಂಕಟವಾಗಿದೆ. ಆ ‘ನೋವ’ನ್ನು ಜನರು ಎಂದಿಗೂ ಮರೆಯುವುದಿಲ್ಲ’ ಎಂದು ಟೀಕಿಸಿದ್ದಾರೆ. ‘ನೋಟು ರದ್ದತಿ ಕಾರಣದಿಂದ ನ.8, 2016ರಂದು ಜನರು ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು’ ಎಂದು ಸ್ಮರಿಸಿದ್ದಾರೆ.

‘ಬ್ಯಾಂಕ್‌ನಿಂದ ತಮ್ಮದೇ ಹಣ ಪಡೆಯಲು ಜನರು ಕಷ್ಟ ಪಟ್ಟರು. ಹಲವರ ಮನೆಗಳಲ್ಲಿ ಮದುವೆಗಳಿದ್ದವು, ಮಕ್ಕಳು, ವಯಸ್ಕರು ಚಿಕಿತ್ಸೆ ಪಡೆಯಬೇಕಾಗಿತ್ತು. ಗರ್ಭಿಣಿಯರಿದ್ದರು. ಸಾಲಿನಲ್ಲಿ ನಿಂತೇ ಹಲವರು ಮೃತಪಟ್ಟರು’ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

‘2022ರಲ್ಲಿ ಆರ್‌ಬಿಐ ಪ್ರಕಟಿಸಿರುವಂತೆ ಬ್ಯಾಂಕ್‌ಗೆ ತಲುಪಿರುವ ₹ 500 ಮುಖಬೆಲೆಯ ನೋಟುಗಳಲ್ಲಿ ಶೇ 101.9ರಷ್ಟು ಹಾಗೂ₹2000 ಮುಖಬೆಲೆಯ ನೋಟುಗಳಲ್ಲಿ ಶೇ 54.16ರಷ್ಟು ನೋಟುಗಳು ನಕಲಿ’ ಎಂದು ಉಲ್ಲೇಖಿಸಿದ್ದಾರೆ.

2016ರಲ್ಲಿ ಒಟ್ಟಾರೆ ₹18 ಲಕ್ಷ ಕೋಟಿ ನಗದು ಚಲಾವಣೆಯಲ್ಲಿದ್ದರೆ, ಈಗ ಚಲಾವಣೆಯಲ್ಲಿ ಇರುವ ಮೊತ್ತ ₹31 ಲಕ್ಷ ಕೋಟಿಯಾಗಿದೆ. ವಾಸ್ತವ ಸ್ಥಿತಿ ಹೀಗಿರುವಾಗ ನಿಮ್ಮ ‘ಡಿಜಿಟಲ್‌ ಇಂಡಿಯಾ’, ‘ಕ್ಯಾಶ್‌ಲೆಸ್‌ ಇಂಡಿಯಾ’ ಪರಿಸ್ಥಿತಿ ಏನಾಯಿತು ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.