ಅಮಿತ್ ಶಾ
(ಪಿಟಿಐ ಚಿತ್ರ)
ಗುವಾಹಟಿ: ಬಿಹಾರದಲ್ಲಿ ನಡೆಯುತ್ತಿರುವ 'ಮತದಾರರ ಅಧಿಕಾರ ಯಾತ್ರೆ'ಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಾಯಿಯ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು (ಶುಕ್ರವಾರ) ಆಗ್ರಹಿಸಿದ್ದಾರೆ.
ರಾಹುಲ್ ಅವರ ಯಾತ್ರೆಯು ಅತ್ಯಂತ ಕೀಳುಮಟ್ಟದ್ದಾಗಿದ್ದು, 'ನುಸುಳುಕೋರರನ್ನು ರಕ್ಷಿಸಿ ಯಾತ್ರೆ'ಯಾಗಿ ಬದಲಾಗಿದೆ ಎಂದು ಶಾ ಆರೋಪಿಸಿದ್ದಾರೆ.
'ರಾಹುಲ್ ಗಾಂಧಿಗೆ ಸ್ವಲ್ಪವಾದರೂ ನಾಚಿಕೆ ಇದ್ದರೆ ಕೂಡಲೇ ಕ್ಷಮೆಯಾಚಿಸಬೇಕು. ಇಡೀ ದೇಶವೇ ರಾಹುಲ್ ಹಾಗೂ ಅವರ ಪಕ್ಷದ ಬಗ್ಗೆ ಅಸಹ್ಯಪಟ್ಟುಕೊಳ್ಳುತ್ತಿದೆ' ಎಂದು ಅವರು ಹೇಳಿದ್ದಾರೆ.
'ನುಸುಳುಕೋರರನ್ನು ರಕ್ಷಿಸುವ ಯಾತ್ರೆಯು ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಅನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ಚುನಾವಣೆಯು ಅದರ ಆತ್ಮವಾಗಿದೆ. ವ್ಯವಸ್ಥೆಯನ್ನು ಕಲುಷಿತಗೊಳಿಸಲು ನುಸುಳುಕೋರರಿಗೆ ಅವಕಾಶ ನೀಡಿದರೆ ರಾಷ್ಟ್ರವು ಭದ್ರವಾಗಿರಲು ಹೇಗೆ ಸಾಧ್ಯ' ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್‌ನ ಈ ಯಾತ್ರೆಯು ಎಲ್ಲ ಎಲ್ಲೆಗಳನ್ನು ಮೀರಿದೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
ಮತದಾರರ ಅಧಿಕಾರ ಯಾತ್ರೆಯಲ್ಲಿ ಪ್ರಧಾನಿ ವಿರುದ್ಧ ನಿಂದನಾತ್ಮಕ ಪದ ಬಳಕೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.