ADVERTISEMENT

ಗುಜರಾತ್‌ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ರಾಹುಲ್‌ ಗಾಂಧಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 19:28 IST
Last Updated 14 ನವೆಂಬರ್ 2022, 19:28 IST
   

ನವದೆಹಲಿ: ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಇದೇ 22ರಂದು ಗುಜರಾತ್‌ನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೆಪ್ಟೆಂಬರ್‌ 7ರಿಂದ ಆರಂಭವಾಗಿರುವ ಕಾಂಗ್ರೆಸ್‌ನ ಭಾರತ್‌ ಜೋಡೊ ಯಾತ್ರೆಯಲ್ಲಿ ಸಕ್ರಿಯವಾಗಿರುವ ರಾಹುಲ್‌ ಗಾಂಧಿ, ಗುಜರಾತಿನ ಸೌರಾಷ್ಟ್ರಕ್ಕೆ ಪ್ರಯಾಣಿಸಲಿದ್ದಾರೆ. ಕಾಂಗ್ರೆಸ್‌ ಬಲಿಷ್ಠವಾಗಿರುವ ಸೌರಾಷ್ಟ್ರದಲ್ಲಿ ರಾಹುಲ್‌ ತಮ್ಮ ಮೊದಲ ಭೇಟಿಯಲ್ಲಿಯೇ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಎರಡನೇ ಹಂತದ ಚುನಾವಣೆಗೂ ಮುನ್ನ ರಾಹುಲ್ ಮತ್ತೊಮ್ಮೆ ಗುಜರಾತಿಗೆ ಭೇಟಿ ನೀಡಲಿದ್ದು, ಆಗಲೂ ಎರಡು ಸಾರ್ವಜನಿಕ ರ್‍ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾಗಿರುವ ಗುಜರಾತ್‌ನ ಚುನಾವಣಾ ಪ್ರಚಾರದಲ್ಲಿ ರಾಹುಲ್‌ ಉಪಸ್ಥಿತಿಯ ಅಗತ್ಯವಿದೆ. ಒಂದು ವೇಳೆ ಅವರು ಗೈರಾದರೆ, ಅದು ತಪ್ಪು ಸಂದೇಶ ರವಾನಿಸುತ್ತದೆ ಎಂಬ ಚರ್ಚೆ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರಲ್ಲಿ ನಡೆಯುತ್ತಿತ್ತು.

ವೀಕ್ಷಕರ ನೇಮಕ: ಕರ್ನಾಟಕದವರಾದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಲೋಕಸಭೆಯ ಮಾಜಿ ಸದಸ್ಯ ಕೆ.ಎಚ್‌. ಮುನಿಯಪ್ಪ ಸೇರಿದಂತೆ ಐವರು ನಾಯಕರನ್ನು ಕಾಂಗ್ರೆಸ್‌ ಗುಜರಾತ್‌ನ ಐದು ವಲಯಗಳಿಗೆ ಚುನಾವಣಾ ವೀಕ್ಷಕರನ್ನಾಗಿ ಸೋಮವಾರ ನೇಮಿಸಿದೆ.

ಬಿ.ಕೆ. ಹರಿಪ್ರಸಾದ್ (ಉತ್ತರ), ಮುಕುಲ್‌ ವಾಸ್ನಿಕ್‌ (ದಕ್ಷಿಣ), ಮೋಹನ್‌ ಪ್ರಕಾಶ್‌ (ಸೌರಾಷ್ಟ್ರ), ಪೃಥ್ವಿರಾಜ್‌ ಚೌಹಾಣ್‌ (ಮಧ್ಯ ಗುಜರಾತ್‌) ಚುನಾವಣಾ ವೀಕ್ಷಕರಾಗಿದ್ದಾರೆ. ಈ ಐವರು ವೀಕ್ಷಕರು, ರಾಜಸ್ಥಾನದ ಮುಖ್ಯಮಂತ್ರಿಯೂ ಆದ ಕೇಂದ್ರ ವೀಕ್ಷಕ ಅಶೋಕ್‌ ಗೆಹಲೋತ್ ಅವರಿಗೆ ವರದಿ ಮಾಡಿಕೊಳ್ಳುವರು. ಇವರ ಜತೆಗೆ ಕಾಂಗ್ರೆಸ್‌ 26 ಲೋಕಸಭಾ ಕ್ಷೇತ್ರಗಳಲ್ಲಿ 32 ವೀಕ್ಷಕರನ್ನೂ ನೇಮಿಸಿದೆ.

2024ರ ಲೋಕಸಭಾ ಚುನಾವಣಾ ಕಾರ್ಯಪಡೆಯ ಸದಸ್ಯರು ಭಾಗವಹಿಸಿದ್ದ ಭಾರತ್‌ ಜೋಡೊ ಯಾತ್ರೆಯ ಪರಾಮರ್ಶೆ ಸಭೆಯಲ್ಲಿ, ರಾಹುಲ್‌ ಗಾಂಧಿ ಅವರು ಗುಜರಾತ್‌ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಕುರಿತುಪ್ರಸ್ತಾಪಿಸಲಾಯಿತು.

ಯಾತ್ರೆಯಿಂದ ಇಲ್ಲಿಯವರೆಗೂ ಆಗಿರುವ ಅನುಕೂಲಗಳ ಕುರಿತು ನಾಯಕರು ಸಭೆಯಲ್ಲಿ ಪರಿಶೀಲಿಸಿದರು. ಜತೆಗೆ ಈ ತಿಂಗಳ ಕೊನೆಯಲ್ಲಿ ಯಾತ್ರೆಯು ಉತ್ತರ ಭಾರತ ಪ್ರವೇಶಿಸಲಿದ್ದು, ಅದರ ಸಿದ್ಧತೆಗಳ ಕುರಿತು ಪರಾಮರ್ಶಿಸಿದರು.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌, ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಸೇರಿದಂತೆ ಭಾರತ್‌ ಜೋಡೊ ಯಾತ್ರೆಯ ‘ಟಾಸ್ಕ್‌ ಫೋರ್ಸ್‌’ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ಬಳಿಕ ಪ್ರತಿಕ್ರಿಯಿಸಿದ ವೇಣುಗೋಪಾಲ್‌, ‘ಯಾತ್ರೆಯ ಪರಿಶೀಲನಾ ಸಭೆ ನಡೆಸಿದ್ದೇವೆ. ಯಾತ್ರೆ ಈಗಾಗಲೇ ಅರ್ಧದಷ್ಟು ಕ್ರಮಿಸಿದೆ. ಈಗ ಉತ್ತರ ಭಾರತದ ಹೃದಯವನ್ನು ಪ್ರವೇಶಿಸುತ್ತಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.