ADVERTISEMENT

ಪೆಗಾಸಸ್‌ ಪ್ರಕರಣ: ಹೋರಾಟದ ಬಲಕ್ಕಾಗಿ ರಾಹುಲ್‌ ಚಹಾಕೂಟ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 18:30 IST
Last Updated 2 ಆಗಸ್ಟ್ 2021, 18:30 IST
ರಾಜ್ಯಸಭೆಯಲ್ಲಿ ಸೋಮವಾರವೂ ಗದ್ದಲ ನಡೆಯಿತು
ರಾಜ್ಯಸಭೆಯಲ್ಲಿ ಸೋಮವಾರವೂ ಗದ್ದಲ ನಡೆಯಿತು   

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟವನ್ನು ಇನ್ನಷ್ಟು ಸುಸಂಘಟಿತಗೊಳಿಸಲು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಮುಂದಾಗಿದ್ದಾರೆ. ಸಮಾನಮನಸ್ಕ ಪಕ್ಷಗಳ ಜತೆಗಿನ ತಮ್ಮ ಒಡನಾಟವನ್ನು ಅವರು ಹೆಚ್ಚಿಸಿದ್ದಾರೆ. ವಿರೋಧ ಪಕ್ಷಗಳ ಸಂಸದರಿಗೆ ರಾಹುಲ್‌ ಅವರು ಮಂಗಳವಾರ ಬೆಳಿಗ್ಗೆ ಚಹಾಕೂಟ ಏರ್ಪಡಿಸಿದ್ದಾರೆ.

ಪೆಗಾಸಸ್‌ ಕುತಂತ್ರಾಂಶ ಬಳಸಿ ಗೂಢಚರ್ಯೆ ನಡೆಸಲಾಗಿದೆ ಎಂಬ ಪ್ರಕರಣದ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಿರುವುದರಿಂದ ಸಂಸತ್‌ ಕಲಾಪಕ್ಕೆ ಬಿಕ್ಕಟ್ಟು ಎದುರಾಗಿದೆ. ಪೆಗಾಸಸ್‌ ಪ್ರಕರಣವು ಚರ್ಚೆ ನಡೆಸುವಂತಹ ಪ್ರಕರಣವೇ ಅಲ್ಲ ಎಂದು ಸರ್ಕಾರ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ, ರಾಹುಲ್‌ ಅವರು ಏರ್ಪಡಿಸಿರುವ ಚಹಾಕೂಟವು ಮಹತ್ವ ಪಡೆದಿದೆ. ರಾಹುಲ್‌ ಅವರು ವಿರೋಧ ಪಕ್ಷಗಳ ಸಂಸದರಿಗೆ ಚಹಾಕೂಟ ಏರ್ಪಡಿಸಿದ್ದು ಇದೇ ಮೊದಲು.

ಲೋಕಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರ ಜತೆಗೆ ರಾಹುಲ್‌ ಅವರು ಜುಲೈ 27ರಂದು ಸಭೆ ನಡೆಸಿದ್ದರು. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಲ್ಲಿಎರಡೂ ಸದನಗಳಲ್ಲಿ ವಿವಿಧ ಪಕ್ಷಗಳ ಸದನ ನಾಯಕರ ಜತೆಗೆ ಜುಲೈ 28ರಂದು ನಡೆದ ಸಭೆಯಲ್ಲಿಯೂ ರಾಹುಲ್‌ ಭಾಗಿಯಾಗಿದ್ದರು.ಪೆಗಾಸಸ್‌ ವಿಚಾರದಲ್ಲಿ ಸರ್ಕಾರದ ವಿರುದ್ಧದ ಹೋರಾಟವನ್ನು ಇನ್ನಷ್ಟು ಮುಂದಕ್ಕೆ ಒಯ್ಯಲು ಮಂಗಳವಾರದ ಸಭೆಯು ನೆರವಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ಸಂಸತ್ತಿನಲ್ಲಿ ಚರ್ಚೆ ಇಲ್ಲದೆ ಮತ್ತು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆ ಇಲ್ಲದೆ ಮಸೂದೆಗಳನ್ನು ಅಂಗೀಕರಿಸಲು ಈಗಿನ ಬಿಕ್ಕಟ್ಟನ್ನು ಸರ್ಕಾರ ಬಳಸಿಕೊಳ್ಳುತ್ತಿದೆ ಎಂಬ ಭಾವನೆಯು ವಿರೋಧ ಪಕ್ಷಗಳ ಕೆಲವರಲ್ಲಿ ಇದೆ.

ಪುರಿ ವಿರುದ್ಧ ದೂರು

ಪೆಟ್ರೋಲಿಯಂ ಸಚಿವ ಹರದೀಪ್‌ ಪುರಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡವನ್ನು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹೆಚ್ಚಿಸಿದೆ. ಈಗ ಅಮಾನತಾಗಿರುವ ರಾಜ್ಯಸಭಾ ಸದಸ್ಯ ಡಾ. ಶಂತನು ಅವರನ್ನು ಪುರಿ ನಿಂದಿಸಿದ್ದಾರೆ ಮತ್ತು ಅವರಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರ ಮುಂದೆ 12 ಸಂಸದರನ್ನು ಸಾಕ್ಷಿಗಳಾಗಿ ಹಾಜರುಪಡಿಸಲಾಗಿದೆ.

ಟಿಎಂಸಿ ಹಾಜರುಪಡಿಸಿರುವ ಸಂಸದರಲ್ಲಿ ಕಾಂಗ್ರೆಸ್‌ನ ಪಿ. ಚಿದಂಬರಂ, ದಿಗ್ವಿಜಯ್‌ ಸಿಂಗ್‌, ಅಮೀ ಯಾಜ್ಞಿ ಮತ್ತು ಶಕ್ತಿಸಿಂಗ್‌ ಗೋಹಿಲ್‌, ಎಸ್‌ಪಿಯ ರಾಮಗೋಪಾಲ್‌ ಯಾದವ್‌, ಡಿಎಂಕೆಯ ತಿರುಚ್ಚಿ ಶಿವಾ, ಎಂಡಿಎಂಕೆಯ ವೈಕೊ, ಆರ್‌ಜೆಡಿಯ ಮನೋಜ್‌ ಕೆ. ಝಾ, ಎಡಪಕ್ಷಗಳ ವಿಕಾಸ್‌ ರಂಜನ್‌ ಭಟ್ಟಾಚಾರ್ಯ ಮತ್ತು ಎಲಮರಂ ಕರೀಮ್‌ ಇದ್ದಾರೆ.

ಮಾಹಿತಿ ತಂತ್ರಜ್ಞಾನ ಸಚಿವ ಅಶ್ವನಿ ವೈಷ್ಣವ್‌ ಅವರ ಕೈಯಲ್ಲಿದ್ದ ಪೆಗಾಸಸ್‌ ಪ್ರಕರಣ ಕುರಿತ ಹೇಳಿಕೆಯ ಪ್ರತಿಯನ್ನು ಕಸಿದುಕೊಂಡು ಹರಿದು ಹಾಕಿದ ಆರೋಪದಲ್ಲಿ ಶಂತನು ಅವರನ್ನು ಜುಲೈ 22ರಂದು ಅಮಾನತು ಮಾಡಲಾಗಿದೆ.

ಹೇಳಿಕೆ ಹರಿದು ಹಾಕಿದ ಪ್ರಕರಣದ ನಂತರ ಪುರಿ ಅವರು ಶಂತನು ಅವರತ್ತ ಧಾವಿಸಿದ್ದರು. ಆಕ್ರಮಣಶೀಲರಾಗಿ ಮುನ್ನುಗಿದ್ದ ಪುರಿ ಅವರನ್ನು ಮಾರ್ಷಲ್‌ಗಳು ತಡೆದರು. ಹಾಗಿದ್ದರೂ, ‘ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.