
ಜಮುಯಿ/ಬಂಕ: ‘ಸೇನಾ ಪಡೆಗಳಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸುವ ಮೂಲಕ ರಾಹುಲ್ ಗಾಂಧಿ ಅವರು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಬುಧವಾರ ಆರೋಪಿಸಿದರು.
ಬಿಹಾರದಲ್ಲಿ ಅವರು ಜಮುಯಿ ಮತ್ತು ಬಂಕ ಪ್ರದೇಶಗಳಲ್ಲಿ ಪ್ರಚಾರ ಸಭೆ ನಡೆಸಿದರು.
‘ರಾಹುಲ್ ಗಾಂಧಿ ಅವರಿಗೆ ಏನಾಗಿದೆ? ರಕ್ಷಣಾ ಪಡೆಗಳಲ್ಲಿ ಮೀಸಲಾತಿ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಅವರು ಯತ್ನಿಸುತ್ತಿದ್ದಾರೆ. ನಮ್ಮ ಸೇನೆ ಈ ಎಲ್ಲದಕ್ಕಿಂತ ಮೇಲಿದೆ. ದೇಶ ನಡೆಸುವುದು ಎಂದರೆ ಮಕ್ಕಳ ಆಟವಲ್ಲ ಎಂಬುದನ್ನು ರಾಹುಲ್ ಅರಿಯಬೇಕು’ ಎಂದರು.
ಬಿಹಾರದಲ್ಲಿ ಪ್ರಚಾರ ನಡೆಸುವ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಕೆರೆಗೆ ಹಾರಿ, ಮೀನುಗಾರಿಕೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೆರೆಗೆ ಹಾರುವುದು ಬಿಟ್ಟು ಅವರಿಗೆ ಬೇರೆ ಯಾವ ಆಯ್ಕೆ ಉಳಿದಿದೆ’ ಎಂದರು.
‘ಜಾತಿ, ಧರ್ಮದ ಆಧಾರದಲ್ಲಿ ಎನ್‌ಡಿಎ ಯಾವತ್ತಿಗೂ ತಾರತಮ್ಯ ಮಾಡುವುದಿಲ್ಲ. ರಾಜ್ಯದಲ್ಲಿ ಎನ್‌ಡಿಎ ಮೈತ್ರಿಯು ಕೇವಲ ‘ವಿಕಸಿತ’ ಬಿಹಾರಕ್ಕಾಗಿ ಮಾತ್ರ ಕೆಲಸ ಮಾಡಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.