ADVERTISEMENT

ಹರಿಯಾಣ: ಮೃತ ಐ‍ಪಿಎಸ್ ಅಧಿಕಾರಿ ‍ಪವನ್ ಕುಮಾರ್ ಮನೆಗೆ ರಾಹುಲ್ ಗಾಂಧಿ ಭೇಟಿ

ಪಿಟಿಐ
Published 14 ಅಕ್ಟೋಬರ್ 2025, 6:55 IST
Last Updated 14 ಅಕ್ಟೋಬರ್ 2025, 6:55 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಚಂಡೀಗಢ: ಹರಿಯಾಣದ ಐಪಿಎಸ್‌ ಅಧಿಕಾರಿ ವೈ.ಪೂರನ್‌ ಕುಮಾರ್‌ ಅವರ ಆತ್ಮಹತ್ಯೆ ಘಟನೆಯು ಕೇವಲ ಒಂದು ಕುಟುಂಬದ ವಿಷಯವಲ್ಲ. ದೇಶದ ಪ್ರತಿಯೊಬ್ಬ ದಲಿತ ಸಹೋದರ, ಸಹೋದರಿಯರ ಗೌರವಕ್ಕೆ ಸಂಬಂಧಿಸಿದ ವಿಷಯ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ರಾಹುಲ್‌ ಅವರು ಮಂಗಳವಾರ ಚಂಡೀಗಢದಲ್ಲಿ ಪೂರನ್‌ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಜಾತಿ ಆಧಾರಿತ ತಾರತಮ್ಯವೆಸಗಿ ಕಿರುಕುಳ ನೀಡಲಾಗುತ್ತಿದೆ ಎಂದು ನೊಂದು ಪೂರನ್‌ ಅವರು ಕಳೆದ ಅ.7ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಸಾವಿಗೆ ಇಲಾಖೆಯ ಕೆಲವು ಅಧಿಕಾರಿಗಳು ಕಾರಣ ಎಂದು ಮರಣಪತ್ರದಲ್ಲಿ ಉಲ್ಲೇಖಿಸಿದ್ದರು.

ADVERTISEMENT

‘ಹರಿಯಾಣ ಡಿಜಿಪಿ ಶತ್ರುಜೀತ್‌ ಕಪೂರ್‌ ಹಾಗೂ ರೋಹಟಕ್‌ ಎಸ್‌ಪಿ ನರೇಂದ್ರ ಬಿಜಾರಾಣಿಯಾ ಅವರು ಕಿರುಕುಳ ನೀಡುವ ಜೊತೆಗೆ ನನ್ನನ್ನು ಸದಾ ಅವಮಾನಿಸುತ್ತಿದ್ದರು’ ಎಂದು ಮರಣಪತ್ರದಲ್ಲಿ ಆರೋಪಿಸಿದ್ದರು.

ಹರಿಯಾಣ ಸರ್ಕಾರವು ಸೋಮವಾರ ತಡರಾತ್ರಿ ಡಿಜಿಪಿ ಶತ್ರುಜೀತ್‌ ಕಪೂರ್‌ ಅವರನ್ನು ರಜೆಯಲ್ಲಿ ಕಳುಹಿಸಿದರೆ, ಅದಕ್ಕೂ ಮೊದಲು ಬಿಜಾರಾಣಿಯಾ ಅವರನ್ನು ವರ್ಗಾವಣೆ ಮಾಡಿದೆ. 

ಪೂರನ್‌ ಕುಟುಂಬ ಸದಸ್ಯರ ಭೇಟಿಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಹುಲ್, ‘ಈ ಅಧಿಕಾರಿಯ ಮನೋಸ್ಥೈರ್ಯ ಕುಗ್ಗಿಸಲು ಮತ್ತು ಅವರ ವೃತ್ತಿಜೀವನ, ಖ್ಯಾತಿಗೆ ಕೇಡು ಉಂಟುಮಾಡಲು ಅವರ ವಿರುದ್ಧ ಹಲವು ವರ್ಷಗಳಿಂದ ವ್ಯವಸ್ಥಿತ ತಾರತಮ್ಯ ಎಸಗಲಾಗಿದೆ’ ಎಂದು ಆರೋಪಿಸಿದರು.

‘ಈ ಘಟನೆಯಿಂದಾಗಿ ದೇಶದ ಕೋಟ್ಯಂತರ ದಲಿತ ಸಹೋದರ, ಸಹೋದರಿಯರಿಗೆ ತಪ್ಪು ಸಂದೇಶ ಹೋಗುತ್ತಿದೆ. ಜೀವನದಲ್ಲಿ ನೀವು ಎಷ್ಟೇ ಯಶಸ್ಸು ಗಳಿಸಿದರೂ ಅಥವಾ ಬುದ್ಧಿವಂತ ಮತ್ತು ಸಮರ್ಥರಾಗಿದ್ದರೂ ನೀವು ದಲಿತರಾಗಿದ್ದರೆ ನಿಮ್ಮನ್ನು ದಮನಿಸುತ್ತಾರೆ ಎಂಬ ತಪ್ಪು ಸಂದೇಶ ಹೋಗುತ್ತಿದೆ. ಇದನ್ನು ಒಪ್ಪಲಾಗದು’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಾಯಬ್‌ ಸಿಂಗ್‌ ಸೈನಿ ತಕ್ಷಣವೇ ಕ್ರಮ ಕೈಗೊಂಡು ಈ ಘಟನೆಗೆ ಕಾರಣರಾದ ಅಧಿಕಾರಿಗಳ ಬಂಧನವನ್ನು ಖಚಿತಪಡಿಸಬೇಕ.
ರಾಹುಲ್‌ ಗಾಂಧಿ ಕಾಂಗ್ರೆಸ್‌ ನಾಯಕ

‘ಬಿಜೆಪಿ ಸರ್ಕಾರದಡಿ ದಲಿತರಿಗೆ ರಕ್ಷಣೆಯಿಲ್ಲ’

ನವದೆಹಲಿ: ಹರಿಯಾಣ ಐಪಿಎಸ್ ಅಧಿಕಾರಿ ವೈ. ಪೂರನ್‌ ಕುಮಾರ್‌ ಅವರ ಆತ್ಮಹತ್ಯೆ ಘಟನೆಯು ಬಿಜೆಪಿ ಸರ್ಕಾರದಡಿ ದಲಿತರು ಸುರಕ್ಷಿತವಾಗಿಲ್ಲ ಎಂಬುದಕ್ಕೆ ಪುರಾವೆಯಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಹೇಳಿದ್ದಾರೆ.

‘ಜಾತಿ ಆಧಾರಿತ ಕಿರುಕುಳದಿಂದ ಕುಮಾರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬವು ನ್ಯಾಯವನ್ನು ಹುಡುಕುತ್ತಾ ಅಲೆದಾಡುತ್ತಿದೆ. ಆದರೆ ಯಾರೂ ಅತ್ತ ಗಮನ ಹರಿಸುತ್ತಿಲ್ಲ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ದಲಿತ ಸಮುದಾಯದ ಜನರು ಉನ್ನತ ಹುದ್ದೆಗಳಲ್ಲಿದ್ದರೂ ಬಿಜೆಪಿ ಆಡಳಿತದಲ್ಲಿ ಅವರು ಸುರಕ್ಷಿತವಾಗಿಲ್ಲ ಮತ್ತು ಅವರಿಗೆ ಯಾವುದೇ ನ್ಯಾಯ ದೊರೆಯುವುದಿಲ್ಲ ಎಂಬುದನ್ನು ಈ ಘಟನೆಯು ಸಾಬೀತುಪಡಿಸಿದೆ. ಈ ಘಟನೆಯಿಂದ ದೇಶ ಹಾಗೂ ಸಮಾಜದ ಮೇಲೆ ಕಪ್ಪು ಚುಕ್ಕೆ ಬಿದ್ದಿದೆ’ ಎಂದಿದ್ದಾರೆ.

- ಎಎಸ್‌ಐ ಆತ್ಮಹತ್ಯೆ: ಮರಣ ಪತ್ರದಲ್ಲಿ ಪೂರನ್ ಹೆಸರು?

ಚಂಡೀಗಢ: ರೋಹಟಕ್ ಜಿಲ್ಲೆಯಲ್ಲಿ ಹರಿಯಾಣ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಸಂದೀಪ್ ಕುಮಾರ್‌ ಎಂಬವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಆರು ನಿಮಿಷಗಳ ವಿಡಿಯೊ ಮಾಡಿಟ್ಟುಕೊಂಡಿದ್ದರಲ್ಲದೆ ಮೂರು ಪುಟಗಳ ಮರಣ ಪತ್ರ ಬರೆದಿದ್ದಾರೆ.

ಮರಣ ಪತ್ರದಲ್ಲಿ ದಿವಂಗತ ಐಪಿಎಸ್‌ ಅಧಿಕಾರಿ ವೈ.ಪೂರನ್‌ ಕುಮಾರ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ವಿಡಿಯೊ ಮತ್ತು ಮರಣ ಪತ್ರದ ಸತ್ಯಾಸತ್ಯತೆಯನ್ನು ತಕ್ಷಣ ಪರಿಶೀಲಿಸಲು ಸಾಧ್ಯವಾಗಿಲ್ಲ. ಸಂದೀಪ್‌ ಅವರ ಮೃತದೇಹ ರೋಹಟಕ್‌ನ ಲಾಡೌಟ್–ಧಾಮಡ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಪತ್ತೆಯಾಗಿದೆ.

‘ಸಂದೀಪ್‌ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಡಿಯೊ ಮತ್ತು ಮರಣ ಪತ್ರದ ಬಗ್ಗೆ ಕೇಳಿದಾಗ ‘ಈ ಹಂತದಲ್ಲಿ ಯಾವುದೇ ಹೇಳಿಕೆ ನೀಡುವುದು ಕಷ್ಟ. ವಿಧಿವಿಜ್ಞಾನ ತಂಡವು ತನಿಖೆ ನಡೆಸುತ್ತಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.