ADVERTISEMENT

ನನ್ನೊಂದಿಗೆ 5 ನಿಮಿಷ ಚರ್ಚಿಸುವ ಧೈರ್ಯ ತೋರಿ: ಮೋದಿಗೆ ಸವಾಲೆಸೆದ ರಾಹುಲ್‌

ಏಜೆನ್ಸೀಸ್
Published 7 ಫೆಬ್ರುವರಿ 2019, 11:40 IST
Last Updated 7 ಫೆಬ್ರುವರಿ 2019, 11:40 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ‘ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಹಾಗೂ ರಾಷ್ಟ್ರೀಯ ಭದ್ರತೆ ಬಗ್ಗೆ ನನ್ನೊಂದಿಗೆ ಐದು ನಿಮಿಷ ಚರ್ಚಿಸುವ ಧೈರ್ಯ ತೋರಿ’ ಎಂದು ಸವಾಲು ಎಸೆದಿದ್ದಾರೆ.

ಪಕ್ಷದ ಅಲ್ಪಸಂಖ್ಯಾತ ಘಟಕದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ ‘ಮೋದಿ ಜೀ, ನೀವು ಹೇಳಿದ್ದೀರಿ ನಿಮಗೆ 56 ಇಂಚಿನ ಎದೆ ಇದೆ ಎಂದು. ಹಾಗಾಗಿಯೇ ನಿಮಗೆ ಸವಾಲು ಹಾಕುತ್ತಿದ್ದೇನೆ’ ಎಂದು ಮೋದಿಯನ್ನು ಕೆಣಕಿದ್ದಾರೆ.

‘ನರೇಂದ್ರ ಮೋದಿ ಒಬ್ಬರು ಪುಕ್ಕಲುತನದ ವ್ಯಕ್ತಿ. ರಾಷ್ಟ್ರೀಯ ಭದ್ರತೆಯ ಬಗ್ಗೆ ಚರ್ಚಯಿಂದ ಅವರು ತ‍ಪ್ಪಿಸಿಕೊಳ್ಳುತ್ತಾರೆ. ಅವರಿಗೆ ವಿರುದ್ಧವಾಗಿ ಯಾರಾದರೂ ಧ್ವನಿ ಎತ್ತಿದ್ದರೆ, ಅವರು ಓಡಿಹೋಗುತ್ತಾರೆ’

ADVERTISEMENT

ಕಳೆದ ನವೆಂಬರ್‌ನಲ್ಲೂ ಈ ಬಗ್ಗೆ ರಾಹುಲ್‌, ಪ್ರಧಾನಿ ಮೋದಿಗೆ ಸವಾಲು ಹಾಕಿದ್ದರು. ಆಗ ಮೋದಿ ಕಳ್ಳ (ಹಿಂದೂಸ್ತಾನ್ ಕೆ ಚೌಕಿದಾರ್ ಚೋರ್ ಹೈ) ಎಂದು ರಾಹುಲ್‌ ಜರಿದಿದ್ದರು. ಕೈಗಾರಿಕೋದ್ಯಮಿ ಅನಿಲ್ ಅಂಬಾನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಯುಪಿಎ ಅಧಿಕಾರದಲ್ಲಿದ್ದಾಗ ಮಾಡಿಕೊಂಡ ಒಪ್ಪಂದವನ್ನು ಬದಲಿಸಲಾಗಿದೆ ಎಂದು ಬಿಜೆಪಿಯನ್ನು ದೂರಿದರು.

ದೇಶದಲ್ಲಿರುವ ಸಂಸ್ಥೆಗಳು ಯಾವ ಪಕ್ಷಕ್ಕೂ ಸೇರಿಲ್ಲ. ಅವು ದೇಶಕ್ಕೆ ಸೇರಿದ್ದವು.ಕಾಂಗ್ರೆಸ್‌ ಆಗಿರಲಿ ಅಥವಾ ಬೇರೆ ಯಾವುದೇ ಪಕ್ಷವಾಗಿರಲಿ ಅವುಗಳನ್ನು ರಕ್ಷಿಸಿರುವುದು ನಮ್ಮ ಜವಾಬ್ದಾರಿ. ಬಿಜೆಪಿ ಅವರು ತಾವು ದೇಶಕ್ಕಿಂತ ದೊಡ್ಡವರೆಂದು ಭಾವಿಸಿದ್ದಾರೆ. ತಮಗಿಂತ ದೇಶವೇ ದೊಡ್ಡದು ಎನ್ನುವ ಸತ್ಯ ಇನ್ನು 3 ತಿಂಗಳಲ್ಲಿ ಅವರಿಗೆ ಅರಿವಾಗಲಿದೆ ಎಂದು ಹೇಳಿದರು.

‘2014ರಲ್ಲಿ ನರೇಂದ್ರ ಮೋದಿಯ ವ್ಯಕ್ತಿತ್ವವನ್ನು ನೋಡಿ, ಅವರು 15 ವರ್ಷ ಅಧಿಕಾರ ನಡೆಸುತ್ತಾರೆ ಎನ್ನುತ್ತಿದ್ದರು.ರೈತರ ವಿಷಯ, ಭ್ರಷ್ಟಾಚಾರ ಅಥವಾ ರಾಷ್ಟ್ರೀಯ ಭದ್ರತೆ... ಹೀಗೆ ಎಲ್ಲಾ ವಿಷಯಗಳಲ್ಲಿ ಅವರು ಮಾಡಿರುವ ಲೋಪಗಳನ್ನು ಕಾಂಗ್ರೆಸ್‌ ಈ ಐದು ವರ್ಷಗಳಲ್ಲಿ ಬಯಲಿಗೆಳೆದಿದೆ. 2019ರ ಚುನಾವಣೆಯನ್ನು ಕಾಂಗ್ರೆಸ್‌, ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನ್ನು ಮಣಿಸಲಿದೆ’ ಎಂದರು.

‘ಈಗ ಮೋದಿಯ ಮುಖವನ್ನು ನೋಡಿ, ಅವರ ಮೊಗದಲ್ಲಿ ನೀವು ಭಯವನ್ನು ಕಾಣುತ್ತೀರಿ. ದೇಶವನ್ನು ಒಡೆದು ಆಡಳಿತ ನಡೆಸಲು ಸಾಧ್ಯವಿಲ್ಲ ಎನ್ನುವುದು ಅವರಿಗೆ ಈಗ ಅರಿವಾಗಿದೆ. ಹಾಗೆ ಮಾಡಿದರೆ, ಜನ ಅವರನ್ನು ಕಿತ್ತೊಗೆಯುತ್ತಾರೆ ಎನ್ನುವುದು ತಿಳಿದಿದೆ’ ಎಂದು ಹೇಳಿದರು.

‘ಬಿಜೆಪಿ ನೇತೃತ್ವದ ಸರ್ಕಾರ ಆರ್‌ಎಸ್‌ಎಸ್‌ನ ನಿಯಂತ್ರಣದಲ್ಲಿದೆ. ನರೇಂದ್ರ ಮೋದಿ ಮುಂದಾಳತ್ವಕ್ಕೆ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್‌ ನಿಯಂತ್ರಕರಾಗಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.