ADVERTISEMENT

ರಾಹುಲ್‌ ಗಾಂಧಿಗೆ 'ಸ್ಥಿರತೆ' ಕೊರತೆ: ಮಿತ್ರಪಕ್ಷ ಎನ್‌ಸಿಪಿ ವರಿಷ್ಠ ಶರದ್ ಪವಾರ್‌

ಪಿಟಿಐ
Published 4 ಡಿಸೆಂಬರ್ 2020, 4:11 IST
Last Updated 4 ಡಿಸೆಂಬರ್ 2020, 4:11 IST
ಪತ್ರಿಕಾಗೋಷ್ಠಿಯೊಂದರಲ್ಲಿ ಶರದ್‌ ಪವಾರ್‌ ಮತ್ತು ರಾಹುಲ್‌ ಗಾಂಧಿ
ಪತ್ರಿಕಾಗೋಷ್ಠಿಯೊಂದರಲ್ಲಿ ಶರದ್‌ ಪವಾರ್‌ ಮತ್ತು ರಾಹುಲ್‌ ಗಾಂಧಿ    

ಪುಣೆ: 'ರಾಷ್ಟಮಟ್ಟದ ನಾಯಕನಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಲ್ಲಿ ಸ್ವಲ್ಪಮಟ್ಟಿಗೆ ಸ್ಥಿರತೆಯ ಕೊರತೆ ಕಾಣಿಸುತ್ತಿದೆ,' ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್‌ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ ಮಿತ್ರಪಕ್ಷದ ನಾಯಕರಾದ ಪವಾರ್, ರಾಹುಲ್‌ ಗಾಂಧಿ ಅವರ ಕುರಿತ ಬರಾಕ್ ಒಬಾಮ ಅವರ ಅಭಿಪ್ರಾಯಗಳಿಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ.

'ಲೋಕಮಾತ ಮೀಡಿಯಾ' ಅಧ್ಯಕ್ಷ ಮತ್ತು ಮಾಜಿ ಸಂಸದ ವಿಜಯ್ ದರ್ದಾ, ಶರದ್‌ ಪವಾರ್‌ ಅವರನ್ನು ಸಂದರ್ಶಿಸಿದ್ದಾರೆ. ಈ ವೇಳೆ ಪವಾರ್‌ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

'ಈ ದೇಶ ರಾಹುಲ್‌ ಗಾಂಧಿಅವರ ನಾಯಕತ್ವವನ್ನು ಒಪ್ಪಲು ಸಿದ್ಧವಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಪವಾರ್‌, 'ಈ ವಿಷಯದಲ್ಲಿ ಕೆಲವು ಪ್ರಶ್ನೆಗಳಿವೆ. ಅವರಿಗೆ ಸ್ಥಿರತೆಯ ಕೊರತೆ ಇದೆ ಎಂದು ಕಾಣುತ್ತದೆ,' ಎಂದು ಹೇಳಿದ್ದಾರೆ.

'ಕಾಂಗ್ರೆಸ್ ನಾಯಕನು ಶಿಕ್ಷಕನನ್ನು ಮೆಚ್ಚಿಸಲು ಉತ್ಸುಕನಾಗಿರುವ ವಿದ್ಯಾರ್ಥಿಯಂತೆ ಕಾಣಿಸುತ್ತಾರೆ. ಆದರೆ, ವಿಷಯವನ್ನು ಕರಗತ ಮಾಡಿಕೊಳ್ಳುವ ಉತ್ಸಾಹ ಅವರಲ್ಲಿಲ್ಲ,' ಎಂದು ಒಬಾಮಾ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶರದ್‌ ಪವಾರ್‌, 'ಎಲ್ಲರ ದೃಷ್ಟಿಕೋನವನ್ನು ಒಪ್ಪಲೇಬೇಕು ಎಂಬ ಅಗತ್ಯವೇನೂ ಇಲ್ಲ,' ಎಂದು ಹೇಳಿದ್ದಾರೆ.

'ನಮ್ಮ ದೇಶದ ನಾಯಕತ್ವದ ಬಗ್ಗೆ ನಾನು ಏನು ಬೇಕಾದರೂ ಹೇಳಬಲ್ಲೆ. ಆದರೆ ಬೇರೆ ದೇಶದ ನಾಯಕತ್ವದ ಬಗ್ಗೆ ಮಾತನಾಡುವುದಿಲ್ಲ. ಪ್ರತಿಯೊಬ್ಬರೂ ಆ ಮಿತಿಯನ್ನು ಕಾಯ್ದುಕೊಳ್ಳಬೇಕು. ಒಬಾಮಾ ಆ ಮಿತಿಯನ್ನು ಮೀರಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.

ಕಾಂಗ್ರೆಸ್ ಭವಿಷ್ಯದ ಬಗ್ಗೆ, ಕಾಂಗ್ರೆಸ್‌ಗೆ ರಾಹುಲ್‌ ಗಾಂಧಿ ಅವರೇ ಅಡಚಣೆಯಾಗುತ್ತಿದ್ದಾರೆಯೇ ಎಂಬ ಬಗ್ಗೆ ಉತ್ತರಿಸಿದ ಪವಾರ್‌, 'ಆತ ಅಥವಾ ಆಕೆ, ಯಾವ ರೀತಿಯ ಸ್ವೀಕಾರಾರ್ಹತೆಯನ್ನು ಸಂಘಟನೆಯಲ್ಲಿ ಹೊಂದಿದ್ದಾರೆ ಎಂಬುದರ ಮೇಲೆ ನಾಯಕತ್ವ ಅವಲಂಬಿಸಿರುತ್ತದೆ,' ಎಂದಿದ್ದಾರೆ.

'ನಾನು (ಕಾಂಗ್ರೆಸ್ ನಾಯಕತ್ವ) ಸೋನಿಯಾಗಾಂಧಿ ಮತ್ತು ಕುಟುಂಬದೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದರೆ, ಕಾಂಗ್ರೆಸ್ಸಿಗರಿಗೆ ಗಾಂಧಿ-ನೆಹರೂ ಕುಟುಂಬದ ಬಗ್ಗೆ ಪ್ರೀತಿಯ ಭಾವನೆ ಇದೆ' ಎಂದು ಎರಡು ದಶಕಗಳ ಹಿಂದೆ ನಾಯಕತ್ವದ ವಿಷಯದಲ್ಲಿ ಕಾಂಗ್ರೆಸ್ ತೊರೆದ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.