ADVERTISEMENT

ಛತ್ತೀಸ್‌ಗಡ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ: ಸಚಿವರನ್ನು ಭೇಟಿಯಾದ ರಾಹುಲ್

ಛತ್ತೀಸ್‌ಗಡ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ

ಪಿಟಿಐ
Published 24 ಆಗಸ್ಟ್ 2021, 13:34 IST
Last Updated 24 ಆಗಸ್ಟ್ 2021, 13:34 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಛತ್ತೀಸ್‌ಗಡ ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಬಗೆಹರಿಸಲು ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹಾಗೂ ಆರೋಗ್ಯ ಸಚಿವ ಟಿ.ಎಸ್. ಸಿಂಗ್ ದೇವ್ ಅವರೊಂದಿಗೆ ಮಂಗಳವಾರ ಸಭೆ ನಡೆಸಿದ್ದಾರೆ.

ರಾಹುಲ್ ಗಾಂಧಿ ಅವರ ಮನೆಯಲ್ಲಿ ನಡೆದ ಈ ಸಭೆಯಲ್ಲಿ ಛತ್ತೀಸ್‌ಗಡದ ಎಐಸಿಸಿ ಉಸ್ತುವಾರಿ ಪಿ.ಎಲ್. ಪುನಿಯಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಕೂಡಾ ಹಾಜರಿದ್ದರು.‌

ಒಟ್ಟು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಬಘೇಲ್ ಮತ್ತು ಸಿಂಗ್ ದೇವ್ ಇಬ್ಬರೂ ರಾಹುಲ್ ಜತೆ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ಇಬ್ಬರ ಮಾತುಗಳನ್ನು ರಾಹುಲ್ ತಾಳ್ಮೆಯಿಂದ ಆಲಿಸಿದರು. ಮುಂದಿನ ದಿನಗಳಲ್ಲಿ‍‍ ‍ಪಕ್ಷದ ಹಿರಿಯ ನಾಯಕರೊಂದಿಗೆ ಸಭೆಗಳು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುನಿಯಾ ಅವರು, ‘ರಾಜ್ಯದ ಅಭಿವೃದ್ಧಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ಹೇಳಿದ್ದಾರೆ. ಪಕ್ಷದಲ್ಲಿನ ನಾಯಕತ್ವದ ಕುರಿತು ನಡೆದ ಚರ್ಚೆಯನ್ನು ಅವರು ಅಲ್ಲಗಳೆದಿದ್ದಾರೆ.

2018ರಲ್ಲಿ ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿಂಗ್ ದೇವ್ ಮತ್ತು ಬಘೇಲ್ ಇಬ್ಬರೂ ತಲಾ 2.5 ವರ್ಷಗಳ ಕಾಲ ಸರದಿ ಪ್ರಕಾರ ಮುಖ್ಯಮಂತ್ರಿಯಾಗುವ ಕುರಿತು ಪ್ರಸ್ತಾಪಿಸಿದ್ದರು. ಇದೀಗ ಇಬ್ಬರ ನಡುವೆ ನಾಯಕತ್ವ ಕುರಿತು ಭಿನ್ನಾಭಿಪ್ರಾಯಗಳು ಉಂಟಾಗಿವೆ ಎಂದು ಮೂಲಗಳು ಹೇಳಿವೆ.

ಸಭೆಗೂ ಮುನ್ನ ಸಿಂಗ್ ದೇವ್ ಮತ್ತು ಬಘೇಲ್ ‘ಇಬ್ಬರೂ ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಬದ್ಧರಾಗಿರುವುದಾಗಿ ಹಾಗೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.