ADVERTISEMENT

ಪಾಕ್ ದಾಳಿಗೆ ತುತ್ತಾದ ಪೂಂಚ್‌ ಸಂತ್ರಸ್ತರ ಭೇಟಿಯಾದ ರಾಹುಲ್: ಸಮಸ್ಯೆ ಚರ್ಚೆಯ ಶಪಥ

ಪಿಟಿಐ
Published 24 ಮೇ 2025, 9:52 IST
Last Updated 24 ಮೇ 2025, 9:52 IST
<div class="paragraphs"><p>ಪೂಂಚ್‌ನಲ್ಲಿರುವ ಶಾಲೆಗೆ ಭೇಟಿ ನೀಡಿದ&nbsp;ರಾಹುಲ್ ಗಾಂಧಿ</p></div>

ಪೂಂಚ್‌ನಲ್ಲಿರುವ ಶಾಲೆಗೆ ಭೇಟಿ ನೀಡಿದ ರಾಹುಲ್ ಗಾಂಧಿ

   

ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಪಾಕಿಸ್ತಾನಿ ಪಡೆಗಳು ಈಚೆಗೆ ನಡೆಸಿದ ಶೆಲ್ ದಾಳಿಯ ಸಂತ್ರಸ್ತರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಭೇಟಿಯಾದರು.

ಶೆಲ್‌ ದಾಳಿಯಿಂದ ಆಗಿರುವ ಹಾನಿಯನ್ನು ‘ದೊಡ್ಡ ದುರಂತ’ ಎಂದು ಕರೆದ ಅವರು, ಎಲ್‌ಒಸಿ ಸಮೀಪದ ಗ್ರಾಮಗಳ ನಿವಾಸಿಗಳು ಅನುಭವಿಸಿರುವ ಸಂಕಷ್ಟವನ್ನು ದೇಶದ ಎಲ್ಲರ ಗಮನಕ್ಕೆ ತರಲಾಗುವುದು ಎಂದರು.

ADVERTISEMENT

ಪೂಂಚ್ ಪಟ್ಟಣಕ್ಕೆ ಭೇಟಿ ನೀಡಿದ ರಾಹುಲ್, ಮೇ 7ರಿಂದ 10ರ ನಡುವಿನ ಅವಧಿಯಲ್ಲಿ ಶೆಲ್‌ ದಾಳಿಯಿಂದ ಮೃತಪಟ್ಟವರ ಕುಟುಂಬದ ಸದಸ್ಯರೂ ಸೇರಿದಂತೆ ಸಂತ್ರಸ್ತರ ಜತೆ ಸುಮಾರು ಒಂದು ಗಂಟೆಗೂ ಹೆಚ್ಚುಹೊತ್ತು ಮಾತುಕತೆ ನಡೆಸಿದರು. 

ಪೂಂಚ್‌ನಲ್ಲಿ ರಾಹುಲ್ ಗಾಂಧಿ

‘ಇದು ಒಂದು ದೊಡ್ಡ ದುರಂತ. ಅವರು (ಪಾಕಿಸ್ತಾನ ಸೇನೆ) ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ಶೆಲ್‌ ದಾಳಿ ನಡೆಸಿದ್ದಾರೆ. ಇದರಿಂದ ಹಲವು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ನಾನು ಸಂತ್ರಸ್ತರ ಜತೆ ಮಾತನಾಡಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ತಮ್ಮ ಸಮಸ್ಯೆಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪಿಸುವಂತೆ ಅವರು ನನ್ನಲ್ಲಿ ಕೇಳಿಕೊಂಡಿದ್ದು, ಆ ಕೆಲಸ ಮಾಡುತ್ತೇನೆ’ ಎಂದು ರಾಹುಲ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಆ ಬಳಿಕ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ ಅವರು, ‘ಪಾಕಿಸ್ತಾನಿ ಪಡೆಗಳ ಶೆಲ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳನ್ನು ಭೇಟಿಯಾದೆ. ಹಾನಿಗೊಳಗಾದ ಮನೆಗಳು, ಚದುರಿ ಬಿದ್ದಿರುವ ವಸ್ತುಗಳು, ಒದ್ದೆಯಾದ ಕಣ್ಣುಗಳು ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವಿನ ಕಥೆಗಳು–  ಈ ದೇಶಭಕ್ತ ಕುಟುಂಬಗಳು ಪ್ರತಿ ಬಾರಿಯೂ ಧೈರ್ಯದಿಂದ ಯುದ್ಧದ ದೊಡ್ಡ ಹೊರೆಯನ್ನು ಹೊರುತ್ತವೆ. ಅವರ ಧೈರ್ಯಕ್ಕೆ ನನ್ನ ನಮಸ್ಕಾರ’ ಎಂದು ಹೇಳಿಕೊಂಡಿದ್ದಾರೆ.

'ಸಂತ್ರಸ್ತ ಕುಟುಂಬಗಳೊಂದಿಗೆ ನಾನು ನಿಲ್ಲುತ್ತೇನೆ. ಖಂಡಿತವಾಗಿಯೂ ಅವರ ಬೇಡಿಕೆಗಳು ಮತ್ತು ಸಮಸ್ಯೆಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತುತ್ತೇನೆ' ಎಂದೂ ರಾಹುಲ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ತಾರಿ‌ಖ್ ಹಮೀದ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ. ಮಿರ್‌ ಒಳಗೊಂಡಂತೆ ಕಾಂಗ್ರೆಸ್‌ನ ಹಿರಿಯ ಮುಖಂಡರು ರಾಹುಲ್‌ ಜತೆಗಿದ್ದರು.

ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತ ಮೇ 7 ರಂದು ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕರ 9 ನೆಲೆಗಳ ಮೇಲೆ ದಾಳಿ ನಡೆಸಿತ್ತು. ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿತ್ತು. ಈ ವೇಳೆ ಪೂಂಚ್ ವಲಯವು ಭಾರಿ ಶೆಲ್‌ ದಾಳಿಗೆ ಸಾಕ್ಷಿಯಾಗಿತ್ತು.

ಮೇ 8 ಮತ್ತು 10 ರ ನಡುವೆ, ಜಮ್ಮು ಪ್ರದೇಶದಲ್ಲಿ, ವಿಶೇಷವಾಗಿ ಪೂಂಚ್‌ನಲ್ಲಿ ಪಾಕಿಸ್ತಾನ ನಡೆಸಿದ ಶೆಲ್, ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ 27 ಜನ ಮೃತಪಟ್ಟು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.