ರಾಹುಲ್ ಗಾಂಧಿ
– ಪಿಟಿಐ ಚಿತ್ರ
ಹಾಥರಸ್: ಹಾಥರಸ್‌ನಲ್ಲಿ 2020ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ದಲಿತ ಯುವತಿಯ ಕುಟುಂಬವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಭೇಟಿ ಮಾಡಿದರು.
ರಾಹುಲ್ ಗಾಂಧಿ ಅವರು 11.15ರ ಸುಮಾರಿಗೆ ಬೂಲ್‌ಗಢಿ ಗ್ರಾಮ ತಲುಪಿದರು. ರಾಹುಲ್ ಗಾಂಧಿ ಭೇಟಿ ಕಾರಣ ಚಂದ್ಪಾ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು.
ಸಂತ್ರಸ್ತೆಯ ನಿವಾಸದಲ್ಲಿ ಆಕೆಯ ಕುಟುಂಬದೊಂದಿಗೆ ಸುಮಾರು 35 ನಿಮಿಷ ಮಾತುಕತೆ ನಡೆಸಿದರು. ನಂತರ ಅಲ್ಲೇ ನಿಂತಿದ್ದ ಸುದ್ದಿಗಾರರೊಂದಿಗೆ ಏನನ್ನೂ ಮಾತನಾಡದೆ ಹೊರಟುಹೋದರು.
‘ಈ ಕುಟುಂಬದೊಂದಿಗೂ ರಾಹುಲ್ ಗಾಂಧಿ ಅವರು ಸಂಪರ್ಕದಲ್ಲಿದ್ದು, ಅವರ ಸಂಕಟವನ್ನು ಆಲಿಸಲು ಇಂದು ಬಂದಿದ್ದರು’ ಎಂದು ಸ್ಥಳೀಯ ಕಾಂಗ್ರೆಸ್ ನಾಯಕ ಚಂದ್ರಗುಪ್ತ ವಿಕ್ರಮಾದಿತ್ಯ ಹೇಳಿದರು.
ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರು ಅಕ್ಟೋಬರ್ 3, 2020ರಂದು ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಿ, ಯುವತಿಯ ಸಾವಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುವುದಾಗಿ ಹೇಳಿದ್ದರು.
ಘಟನೆ ಏನು?
2020 ಸೆಪ್ಟೆಂಬರ್ 14ರಂದು 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಚಿಕಿತ್ಸೆಗಾಗಿ ಆಕೆಯನ್ನು ಮೊದಲು ಅಲಿಗಢ ಆಸ್ಪತ್ರೆಗೆ ದಾಖಲಿಸಿ, ನಂತರ ದೆಹಲಿಗೆ ಸ್ಥಳಾಂತರಿಸಲಾಗಿತ್ತು. ಸೆಪ್ಟೆಂಬರ್ 29ರಂದು ಆಕೆ ಮೃತಪಟ್ಟಿದ್ದಳು. ಅಕ್ಟೋಬರ್ 30ರ ಮುಂಜಾನೆ ಅಂತ್ಯಕ್ರಿಯೆ ನಡೆದಿತ್ತು.
‘ತರಾತುರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸುವಂತೆ ಪೊಲೀಸರು ಒತ್ತಾಯಿಸಿದ್ದರು’ ಎಂದು ಸಂತ್ರಸ್ತೆ ಕುಟುಂಬ ಆರೋಪಿಸಿತ್ತು. ಇದನ್ನು ಅಲ್ಲಗೆಳೆದಿದ್ದ ಪೊಲೀಸರು, ಕುಟುಂಬ ಹೇಳಿದಂತೆಯೇ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದಿದ್ದರು.
ಪ್ರಚಾರಕ್ಕಾಗಿ ಭೇಟಿ: ಬ್ರಿಜೇಶ್ ಪಾಠಕ್
‘ರಾಹುಲ್ ಗಾಂಧಿ ಅವರು ಸಂಭಲ್ ಅಥವಾ ಹಾಥರಸ್‌ಗೆ ಪ್ರಚಾರಕ್ಕಾಗಿ ಭೇಟಿ ನೀಡುತ್ತಾರೆಯೇ ವಿನಃ ಬೇರಾವುದೇ ಕಾರಣಕ್ಕಾಗಿ ಅಲ್ಲ’ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಟೀಕಿಸಿದರು. ‘ರಾಹುಲ್ ‘ಗೊಂದಲದಲ್ಲಿದ್ದಾರೆ’ ಮತ್ತು ಈ ಪ್ರಕರಣದ ಸ್ಥಿತಿಯ ಬಗ್ಗೆ ಅವರಿಗೆ ಅರಿವಿಲ್ಲ’ ಎಂದು ಹೇಳಿದರು. ‘ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ. ಬಿಜೆಪಿ ಆಡಳಿತದಲ್ಲಿ ಯಾವೊಬ್ಬ ತಪ್ಪಿತಸ್ಥನೂ ಶಿಕ್ಷೆ ಇಲ್ಲದೆ ಓಡಾಡಲು ಸಾಧ್ಯವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.