ADVERTISEMENT

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ರಾಮ ಮಂದಿರ ಮಾದರಿಯ ರೈಲು ನಿಲ್ದಾಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2020, 7:12 IST
Last Updated 3 ಆಗಸ್ಟ್ 2020, 7:12 IST
ಸಚಿವ ಪೀಯೂಷ್ ಗೋಯಲ್ ಟ್ವೀಟ್ ಮಾಡಿರುವ ಚಿತ್ರ
ಸಚಿವ ಪೀಯೂಷ್ ಗೋಯಲ್ ಟ್ವೀಟ್ ಮಾಡಿರುವ ಚಿತ್ರ   

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ಮಾದರಿಯ ರೈಲು ನಿಲ್ದಾಣ ನಿರ್ಮಿಸಲು ಭಾರತೀಯ ರೈಲ್ವೆ ಕಾರ್ಯಪ್ರವೃತ್ತವಾಗಿದೆ. ನಿಲ್ದಾಣದ ಕಟ್ಟಡ ವಿನ್ಯಾಸವು ಮಂದಿರದಂತೆ ಗುಮ್ಮಟ, ಗೋಪುರಗಳನ್ನು ಒಳಗೊಂಡಿರಲಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಈಗಿರುವ ನಿಲ್ದಾಣವನ್ನು ₹80 ಕೋಟಿ ವೆಚ್ಚದೊಂದಿಗೆ ಆಧುನೀಕರಣಗೊಳಿಸುವ ಯೋಜನೆಗೆ ಸರ್ಕಾರ 2017–18ರಲ್ಲಿ ಅನುಮೋದನೆ ನೀಡಿತ್ತು. ಬಳಿಕ ವೆಚ್ಚವನ್ನು ₹104 ಕೋಟಿಗೆ ಹೆಚ್ಚಳ ಮಾಡಿ ನಿಲ್ದಾಣದಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು. ಯೋಜನೆ ಪ್ರಕಾರ, ಎರಡು ಹಂತಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ.

ಮೊದಲ ಹಂತದ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು 2021ರ ಜೂನ್‌ಗೆ ಪೂರ್ಣಗೊಳ್ಳಲಿದೆ. ಎರಡನೇ ಹಂತದ ಕಾಮಗಾರಿ 2023–24ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಿಲ್ದಾಣವು ಒಟ್ಟು 1 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರಲಿದೆ.

ADVERTISEMENT

‘ದೇಶದ ಕೋಟ್ಯಂತರ ಜನರ ನಂಬಿಕೆಯ ಪ್ರತೀಕವಾಗಿರುವ ಶ್ರೀ ರಾಮ ಜನ್ಮಭೂಮಿಯ ಮಂದಿರಕ್ಕೆ ಭೇಟಿ ನೀಡಲು ಬರುವ ಭಕ್ತರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರೈಲ್ವೆ ಇಲಾಖೆಯು ಅಯೋಧ್ಯೆಯ ನಿಲ್ದಾಣವನ್ನು ಅಭಿವೃದ್ಧಿಪಡಿಸುತ್ತಿದೆ’ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ರೈಲ್ವೆ ಇಲಾಖೆಯ ಅಧೀನದಲ್ಲಿರುವ ರೈಟ್ಸ್ (RITES) ಸಂಸ್ಥೆಗೆ ಆಧುನೀಕರಣ ಕಾಮಗಾರಿಯ ಜವಾಬ್ದಾರಿ ವಹಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ನಿಲ್ದಾಣವು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರಲಿದೆ ಎಂದು ಉತ್ತರ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ರಾಜೀವ್ ಚೌಧರಿ ಹೇಳಿದ್ದಾರೆ.

ಈಗಾಗಲೇ ಇರುವ ಟಿಕೆಟ್ ಕೌಂಟರ್‌ಗಳು, ವಿಶ್ರಾಂತಿ ಕೊಠಡಿ, ಹವಾನಿಯಂತ್ರಿತ ವಿಶ್ರಾಂತಿ ಕೊಠಡಿಗಳನ್ನು ವಿಸ್ತರಿಸಲಾಗುತ್ತದೆ. ಹೆಚ್ಚುವರಿ ಪಾದಚಾರಿ ಮೇಲ್ಸೇತುವೆಗಳು, ಆಹಾರ ಮಳಿಗೆಗಳು, ಅಂಗಡಿಗಳು, ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ. ಪ್ರವಾಸಿ ಕೇಂದ್ರ, ಟ್ಯಾಕ್ಸಿ ಬೂತ್, ಶಿಶು ವಿಹಾರ್ ಸೌಲಭ್ಯಗಳನ್ನೂ ಕಲ್ಪಿಸಲಾಗುವುದು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇದೇ 5ರಂದು ಭೂಮಿಪೂಜೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.