ADVERTISEMENT

50 ರೈಲ್ವೆ ಮಾರ್ಗ ಖಾಸಗೀಕರಣಕ್ಕೆ ಸಿದ್ಧತೆ: ಕಾರ್ಯಾಸಾಧ್ಯತೆ ಪರಿಶೀಲನೆಗೆ ಸೂಚನೆ

ಪಿಟಿಐ
Published 28 ಸೆಪ್ಟೆಂಬರ್ 2019, 12:08 IST
Last Updated 28 ಸೆಪ್ಟೆಂಬರ್ 2019, 12:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಖಾಸಗಿಯವರಿಗೆ ಪ್ರಾಯೋಗಿಕವಾಗಿ ರೈಲು ಓಡಿಸಲು ದೇಶದ 50 ಪ್ರಮುಖ ಮಾರ್ಗಗಳನ್ನು ಇಲಾಖೆ ಗುರುತಿಸಿದೆ. ಇದರ ಕಾರ್ಯಾಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸುವಂತೆ ಆಯಾ ರೈಲ್ವೆ ವಲಯಗಳಿಗೆ ಸೂಚನೆ ನೀಡಲಾಗಿದೆ.

ಶುಕ್ರವಾರ ನಡೆದ ರೈಲ್ವೆ ಮಂಡಳಿ ಸದಸ್ಯರ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಆರು ರೈಲ್ವೆ ವಲಯಗಳ ಮುಖ್ಯ ಕಾರ್ಯಾಚರಣೆ ಅಧಿಕಾರಿಗಳು ಭಾಗಿಯಾಗಿದ್ದರು. ಖಾಸಗಿಯವರಿಗೆ ಪ್ರಯಾಣಿಕರ ರೈಲುಗಳನ್ನು ಪರಿಚಯಿಸುವ ಬಗ್ಗೆ ಚರ್ಚೆ ನಡೆಯಿತು.

‘ಆಯಾ ವಲಯಗಳ ರೈಲ್ವೆ ಅಧಿಕಾರಿಗಳು ಮೂಲಸೌಕರ್ಯ ಯೋಜನೆ, ಸಾಮರ್ಥ್ಯ ಹೆಚ್ಚಳ ಕಾಮಗಾರಿಗಳನ್ನು ನೋಡಿಕೊಂಡು ಹೆಚ್ಚುವರಿ ಮತ್ತು ಹೊಸ ರೈಲು ಪರಿಚಯಿಸುವ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ, ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಐಆರ್‌ಸಿಟಿಸಿ ತೇಜಸ್ಎಕ್ಸ್‌ಪ್ರೆಸ್:ರೈಲ್ವೆ ಇಲಾಖೆಯ ಅಂಗಸಂಸ್ಥೆ ಐಆರ್‌ಸಿಟಿಸಿಯ ತೇಜಸ್ ಎಕ್ಸ್‌ಪ್ರೆಸ್ ರೈಲನ್ನು ಇಲಾಖೆ ಸೋಮವಾರ ಪ್ರಕಟಿಸಿತ್ತು. ಈ ರೈಲು ದೆಹಲಿ–ಲಖನೌ ಮಾರ್ಗದಲ್ಲಿ ವಾರದ ಆರು ದಿನ ಸಂಚರಿಸಲಿದ್ದು, ಅಕ್ಟೋಬರ್ 5ರಂದು ಆರಂಭವಾಗಲಿದೆ. ಇದು ರೈಲ್ವೆ ಕಾರ್ಯಾಚರಣೆಯನ್ನು ಖಾಸಗಿಯವರಿಗೆ ವಹಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಮುಂಬೈ–ಅಹಮದಾಬಾದ್ ನಡುವಿನ ಎರಡನೇ ತೇಜಸ್ ರೈಲು ಓಡಾಟದ ದಿನಾಂಕವನ್ನು ಐಆರ್‌ಸಿಟಿಸಿ ಇನ್ನಷ್ಟೇ ಪ್ರಕಟಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.