ADVERTISEMENT

ಜಾತಿ ಆಧಾರದಲ್ಲಿ ಹುದ್ದೆಗೆ ಅರ್ಜಿ: ಕೇಟರಿಂಗ್ ಗುತ್ತಿಗೆಯೇ ರದ್ದು!

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 20:30 IST
Last Updated 7 ನವೆಂಬರ್ 2019, 20:30 IST

ನವದೆಹಲಿ: ನಿರ್ದಿಷ್ಟ ಜಾತಿಯ ಅಭ್ಯರ್ಥಿಗಳಿಂದ ಮಾತ್ರ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದ್ದ ರೈಲ್ವೆ ಕೇಟರಿಂಗ್‌ ಗುತ್ತಿಗೆದಾರರ ಕ್ರಮ ವ್ಯಾಪಕ ಟೀಕೆಗೆ ಗುರಿಯಾದ ಕಾರಣ, ರೈಲ್ವೆ ಇಲಾಖೆ ಗುತ್ತಿಗೆಯನ್ನೇ ರದ್ದುಪಡಿಸಿದೆ.

ಗುತ್ತಿಗೆದಾರ ಸಂಸ್ಥೆ ನೀಡಿದ್ದ ಜಾಹೀರಾತು ವೈರಲ್‌ ಆಗುತಿದ್ದಂತೆಯೇ, ಕೇಟರಿಂಗ್‌ ವ್ಯವಸ್ಥೆ ಮೇಲ್ವಿಚಾರಣೆ ಮಾಡುವ ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಕ್ರಮಜರುಗಿಸಿದೆ.

ಕೇಟರಿಂಗ್‌ ಗುತ್ತಿಗೆ ಪಡೆದಿದ್ದ ಬೃಂದಾವನ್ ಫುಡ್ ಪ್ರಾಡಕ್ಟ್ಸ್‌ ಸಂಸ್ಥೆಯು ಕೇಟರಿಂಗ್‌ ವ್ಯವಸ್ಥಾಪಕ, ಅಡುಗೆ ಮನೆ ಮೇಲ್ವಿಚಾರಕ ಮತ್ತು ಸ್ಟೋರ್ ಮ್ಯಾನೇಜರ್ ಹುದ್ದೆಗಳಿಗೆ 100 ಜನರ ನೇಮಕಕ್ಕೆ ಅರ್ಜಿ ಆಹ್ವಾನಿಸಿತ್ತು.

ADVERTISEMENT

ಪಿಯುಸಿ ವಿದ್ಯಾರ್ಹತೆಯುಳ್ಳ, ‘ಅಗರವಾಲ್‌ ವೈಶ್ಯ ಸಮುದಾಯ’ದ, ‘ಉತ್ತಮ ಕೌಟುಂಬಿಕ ಹಿನ್ನೆಲೆ‘ಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿತ್ತು. ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ಐಆರ್‌ಸಿಟಿಸಿ ಜಾತಿ ಆಧಾರದಲ್ಲಿ ಜಾಹೀರಾತು ನೀಡಬಾರದು ಎಂದು ತಾಕೀತು ಮಾಡಿದೆ. ಅಲ್ಲದೆ, ‘ಇಂಥ ಜಾಹೀರಾತು ಹೊರಬರಲು ಸಂಸ್ಥೆಯ ವ್ಯವಸ್ಥಾಪಕ (ಎಚ್.ಆರ್) ಕಾರಣವಾಗಿದ್ದು, ಆತನನ್ನು ಕೆಲಸದಿಂದ ತೆಗೆದುಹಾಕಿದೆ‘ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಸಾರ್ವಜನಿಕರು, ‘ನೇಮಕಾತಿ ಅಭ್ಯರ್ಥಿಗೆ ಜಾತಿಯೇ ಮಾನದಂಡವಾಗಬಾರದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.