ADVERTISEMENT

ಕೊಂಕಣ ರೈಲ್ವೆಯಿಂದ 9 ನಿಲ್ದಾಣಗಳಲ್ಲಿ ಮಳೆ ಮಾಪನ ಕೇಂದ್ರ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 7:08 IST
Last Updated 6 ಜೂನ್ 2021, 7:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಕೊಂಕಣ ರೈಲ್ವೆ ವ್ಯಾಪ್ತಿಯ 9 ರೈಲು ನಿಲ್ದಾಣಗಳಲ್ಲಿ ಸ್ವಯಂ ದಾಖಲು ಸೌಲಭ್ಯದ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಪ್ರವಾಹ ಕುರಿತು ಮುನ್ಸೂಚನೆ ನೀಡುವ ಸಂಬಂಧ ಮೂರು ಸ್ಥಳಗಳಲ್ಲಿ ವಿಶೇಷ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ ಎಂದು ಕೊಂಕಣ ರೈಲ್ವೆ ನಿಗಮ ತಿಳಿಸಿದೆ.

ಕೊಂಕಣ ರೈಲು ಮಾರ್ಗವು ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಮೂಲಕ ಹಾಯ್ದು ಹೋಗುತ್ತದೆ. ಕೊಂಕಣ ಪ್ರದೇಶದಲ್ಲಿ ಮುಂಗಾರು ಅವಧಿಯಲ್ಲಿ ಭಾರಿ ಮಳೆಯಾಗುತ್ತದೆ. ಹೀಗಾಗಿ 740 ಕಿ.ಮೀ. ಉದ್ದದ ಮಾರ್ಗದಲ್ಲಿ ಈ ಸಮಯದಲ್ಲಿ ರೈಲುಗಳ ಸಂಚಾರಕ್ಕೆ ಸಾಕಷ್ಟು ಅಡ್ಡಿಯುಂಟಾಗುತ್ತದೆ.

ADVERTISEMENT

ಮಜಗಾಂವ, ಚಿಪ್ಳೂಣ, ರತ್ನಗಿರಿ, ವಿಲ್ವಾಡೆ, ಕನಕವಲಿ, ಮಡಗಾಂವ, ಕಾರವಾರ, ಭಟ್ಕಳ ಹಾಗೂ ಉಡುಪಿಗಳಲ್ಲಿ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಮನಗಾಂವ ಹಾಗೂ ವೀರ್‌ ನಡುವೆ ಕಾಳಿ ನದಿ ಹರಿಯುವ ಸ್ಥಳದಲ್ಲಿ, ಸಾವಿತ್ರಿ ನದಿ ಬಳಿ (ವೀರ್‌ ಹಾಗೂ ಸಾಪೆ ವಾಮಣೆ ನಡುವೆ), ವಶಿಷ್ಟಿ ನದಿ ಬಳಿ (ಚಿಪ್ಳೂಣ ಹಾಗೂ ಕಮಠೆ ನಡುವೆ) ಪ್ರವಾಹ ಮುನ್ಸೂಚನೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದಿಢೀರ್‌ ಪ್ರವಾಹ ಬಂದ ಸಂದರ್ಭದಲ್ಲಿ, ನದಿಗಳಲ್ಲಿ ನೀರು ಅಪಾಯದ ಮಟ್ಟ ತಲುಪಿದಾಗ ಈ ಕೇಂದ್ರಗಳು ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತವೆ ಎಂದು ನಿಗಮ ತಿಳಿಸಿದೆ.

ಗಾಳಿಯ ವೇಗವನ್ನು ಅಳೆಯುವ ಮಾಪಕಗಳನ್ನು ನಾಲ್ಕು ಸ್ಥಳಗಳಲ್ಲಿ ಅಳವಡಿಸಲಾಗಿದೆ. ಬೇಲಾಪುರ, ರತ್ನಗಿರಿ ಹಾಗೂ ಮಡಗಾಂವಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ನೈರುತ್ಯ ಮುಂಗಾರು ಬರುವ ದಿನಗಳಲ್ಲಿ ಮತ್ತಷ್ಟು ಚುರುಕಾಗುವ ಕಾರಣ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಿಗಮ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.