ADVERTISEMENT

ಮಳೆ ಪ್ರಮಾಣ ಇಳಿಕೆ: ಮುಂಬೈನಲ್ಲಿ ಸಾರಿಗೆ, ರೈಲು ಸೇವೆ ಪುನರಾರಂಭ

ಪಿಟಿಐ
Published 19 ಜುಲೈ 2021, 6:47 IST
Last Updated 19 ಜುಲೈ 2021, 6:47 IST
ಭಾನುವಾರ ಸುರಿದಿದ್ದ ಭಾರಿ ಮಳೆಗೆ ಮುಂಬೈ ನಗರದ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದವು–ಪಿಟಿಐ ಚಿತ್ರ
ಭಾನುವಾರ ಸುರಿದಿದ್ದ ಭಾರಿ ಮಳೆಗೆ ಮುಂಬೈ ನಗರದ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದವು–ಪಿಟಿಐ ಚಿತ್ರ   

ಮುಂಬೈ: ‘ಭಾರಿ ಮಳೆಗೆ ತತ್ತರಿಸಿದ್ದ ಮುಂಬೈನ ಜನಜೀವನ ಸೋಮವಾರ ಯಥಾಸ್ಥಿತಿಗೆ ಮರಳಿದ್ದು, ಸಾರಿಗೆ ಮತ್ತು ರೈಲು ಸೇವೆ ಪುನರಾರಂಭಗೊಂಡಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮುಂಬೈನಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯಲ್ಲಿ ಸಂಭವಿಸಿದ ಅವಘಡಗಳಲ್ಲಿ 30 ಮಂದಿ ಮೃತಪಟ್ಟಿದ್ದರು. ವಾಹನ ಮತ್ತು ರೈಲು ಸಂಚಾರ ಅಸ್ತವ್ಯಸ್ತವಾಗಿತ್ತು.

‘ಮಹುಲ್‌ ಪ್ರದೇಶದಲ್ಲಿ ಭಾನುವಾರ ಭೂ ಕುಸಿತದಿಂದಾಗಿ ಸಂಭವಿಸಿದ ಮನೆಯ ಗೋಡೆ ಕುಸಿತದಲ್ಲಿ 19 ಮಂದಿ ಮೃತಪಟ್ಟಿದ್ದರೆ, ವಿಕ್ರೋಲಿಯಲ್ಲೂ ಮನೆ ಕುಸಿತದಿಂದ 10 ಮಂದಿ ಸಾವಿಗೀಡಾಗಿದ್ದರು. ಭಂಡಪ್ ಪ್ರದೇಶದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಗೋಡೆಯೊಂದು ಕುಸಿದು ಒಬ್ಬ ವ್ಯಕ್ತಿ ಮೃತಪಟ್ಟಿದ್ದರು. ಸೋಮವಾರ ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ’ ಎಂದು ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಮುಂಬೈನ ಪೂರ್ವ ಭಾಗದಲ್ಲಿರುವ ಉಪನಗರಗಳಲ್ಲಿ ಸೋಮವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ 90.65 ಮಿ.ಮೀ ಮಳೆ ಸುರಿದಿದೆ. ಪಶ್ಚಿಮ ಉಪನಗರಗಳಲ್ಲಿ 48.88 ಮಿ.ಮೀ ಮಳೆ ಸುರಿದಿದೆ’ ಎಂದು ಅವರು ಹೇಳಿದರು.

ಭಾರತೀಯ ಹವಾಮಾನ ಇಲಾಖೆಯು(ಐಎಂಡಿ) ಸೋಮವಾರ ಮುಂಬೈನಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದೆ.

‘ಭಾರಿ ಮಳೆಯಿಂದಾಗಿ ಭಾನುವಾರ ರೈಲು ಹಳಿಗಳಲ್ಲಿ ನೀರು ತುಂಬಿದ್ದವು. ಈ ಹಿನ್ನೆಲೆಯಲ್ಲಿ ಕೆಲವು ಗಂಟೆಗಳ ಕಾಲ ಉಪನಗರ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ರೈಲ್ವೆ ಸೇವೆ ಸಾಮಾನ್ಯ ಸ್ಥಿತಿಗೆ ಮರಳಿದೆ’ ಎಂದು ಕೇಂದ್ರ ಮತ್ತು ಪಶ್ಚಿಮ ರೈಲ್ವೆ ವಿಭಾಗದ ವಕ್ತಾರರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.