ADVERTISEMENT

Rain: ಕೇರಳ, ಮಹಾರಾಷ್ಟ್ರ, ಉ.ಪ್ರದೇಶದಲ್ಲಿ ಭಾರಿ ಮಳೆ

ಪಿಟಿಐ
Published 16 ಜೂನ್ 2025, 14:14 IST
Last Updated 16 ಜೂನ್ 2025, 14:14 IST
ಮಹಾರಾಷ್ಟ್ರದಲ್ಲಿ ಸೋಮವಾರ ಭಾರಿ ಮಳೆಯಾಗಿದ್ದು, ಠಾಣೆ ನಗರದಲ್ಲಿ ನೀರು ನಿಂತ ರಸ್ತೆಯಲ್ಲೇ ವಾಹನ ಸವಾರರು ಸಾಗಿದರು–ಪಿಟಿಐ ಚಿತ್ರ
ಮಹಾರಾಷ್ಟ್ರದಲ್ಲಿ ಸೋಮವಾರ ಭಾರಿ ಮಳೆಯಾಗಿದ್ದು, ಠಾಣೆ ನಗರದಲ್ಲಿ ನೀರು ನಿಂತ ರಸ್ತೆಯಲ್ಲೇ ವಾಹನ ಸವಾರರು ಸಾಗಿದರು–ಪಿಟಿಐ ಚಿತ್ರ   

ಮುಂಬೈ/ ತಿರುವನಂತಪುರ: ಮಹಾರಾಷ್ಟ್ರ, ಕೇರಳ ಹಾಗೂ ಉತ್ತರಪ್ರದೇಶದ ವಿವಿಧೆಡೆ ಸೋಮವಾರವೂ ಭಾರಿ ಮಳೆಯಾಗಿದೆ. ‌

ಜೂನ್‌ 1ರಿಂದ ಇಲ್ಲಿಯವರೆಗೆ ಮಳೆ ಪರಿಣಾಮದಿಂದಾಗಿ ಮಹಾರಾಷ್ಟ್ರದಲ್ಲಿ 18 ಮಂದಿ ಮೃತಪಟ್ಟಿದ್ದು, 65 ಮಂದಿ ಗಾಯಗೊಂಡಿದ್ದಾರೆ. 6 ಹಸುಗಳು ಮೃತಪಟ್ಟಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಭಾರಿ ಮಳೆ, ರಸ್ತೆ ಅಪಘಾತ, ಸೇತುವೆ ಕುಸಿತ, ಸಿಡಿಲು ಬಡಿದಿರುವುದು ಹಾಗೂ ಅಗ್ನಿ ಅನಾಹುತದಿಂದ ಮೃತಪಟ್ಟಿರುವವರ ಬಗ್ಗೆ ವರದಿಯಾಗಿದೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಮಹಾರಾಷ್ಟ್ರದಲ್ಲಿ ನೈಋತ್ಯ ಮಾರುತವು ಚುರುಕಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮುಂಬೈ ನಗರ, ರತ್ನಗಿರಿ, ಸಿಂಧುದುರ್ಗ, ರಾಯಗಢದಲ್ಲಿ ಗರಿಷ್ಠ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಎಸ್‌ಡಿಆರ್‌ಎಫ್ ತಿಳಿಸಿದೆ.

ಕೇರಳದಲ್ಲಿ ಭಾರಿ ಮಳೆ– ರೈಲು ಸಂಚಾರ ಅಸ್ತವ್ಯಸ್ತ: ಕೇರಳದಲ್ಲಿ ಸೋಮವಾರ ಭಾರಿ ಮಳೆ ಮುಂದುವರಿದಿದ್ದು, ರಸ್ತೆ, ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. 

ರಾಜ್ಯದ ಉತ್ತರ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ, ನದಿಗಳ ನೀರಿನ ಮಟ್ಟವು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಣ್ಣೂರು, ಕಾಸರಗೋಡು ಜಿಲ್ಲೆಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ನೂರಾರು ಮಂದಿಯನ್ನು ಮನೆಯಿಂದ ಆಶ್ರಯ ಕೇಂದ್ರಗಳಿಗೆ‌ ಸ್ಥಳಾಂತರಿಸಲಾಗಿದೆ.

ಕಣ್ಣೂರಿನ ಕಕ್ಕಡ್‌ ಪ್ರದೇಶದ ಮುಖ್ಯ ರಸ್ತೆಯು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಶಾಲೆ ಹಾಗೂ ಕಚೇರಿಗೆ ತೆರಳುತ್ತಿದ್ದವರಿಗೆ ಸಮಸ್ಯೆ ಉಂಟಾಯಿತು. ರಸ್ತೆಯಲ್ಲಿ 1ರಿಂದ 2 ಅಡಿಗಳವರೆಗೆ ನೀರು ನಿಂತ ಕಾರಣ, ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಯಿತು.

ಸಿಡಿಲಿನ ಹೊಡೆತಕ್ಕೆ ಇಬ್ಬರು ಬಲಿ– ಗೊಂಡಾ, ಉತ್ತರ ಪ್ರದೇಶ (ಪಿಟಿಐ): ಗೊಂಡಾ ಜಿಲ್ಲೆಯಲ್ಲಿ ಸಿಡಿಲಿನ ಹೊಡೆತಕ್ಕೆ ಇಬ್ಬರು ಮೃತಪಟ್ಟಿದ್ದಾರೆ.

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮಳೆಯಲ್ಲಿ ಸಾಗಿದ ಜನರು

ಜಿಲ್ಲೆಯ ದತ್‌ನಗರ ನಿವಾಸಿ ಕುನಾಲ್‌ ಶರ್ಮಾ (20) ಅವರು ಮನೆಯ ಮುಂಭಾಗದ ಕೈ ಪಂಪ್‌ನಲ್ಲಿ ನೀರು ಸಂಗ್ರಹಿಸುತ್ತಿದ್ದ ವೇಳೆ ಸಿಡಿಲಿನ ಹೊಡೆತದಿಂದಾಗಿ ಕುಸಿದುಬಿದ್ದರು. ತಕ್ಷಣವೇ ಗೊಂಡಾ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಯಿತಾದರೂ, ಅಷ್ಟು ಹೊತ್ತಿಗೆ ಅವರು ಮೃತಪಟ್ಟಿದ್ದರು. 

ಖಾಜಿ ದೇವರ್ ಗ್ರಾಮದ ನಿವಾಸಿ ರಾಮ್‌ದೇವ್‌ ಯಾದವ್‌ (46) ಮಳೆ ವೇಳೆ ಮನೆಯ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಮಿಂಚಿನ ಹೊಡೆತಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಳೆ ಅನಾಹುತ– ಎಲ್ಲೆಲ್ಲಿ ಏನು?:

  • ಮುಂಬೈನಲ್ಲಿ ಸಂಚಾರ ದಟ್ಟಣೆ, ಉಪನಗರ ರೈಲು, ಮೆಟ್ರೊ ರೈಲು ಸಂಚಾರದಲ್ಲಿ ವ್ಯತ್ಯಯ

  • ಪಶ್ಚಿಮ ರೈಲ್ವೆ ವಲಯದಲ್ಲಿ 30 ನಿಮಿಷ ತಡವಾಗಿ ಸಂಚರಿಸಿದ ರೈಲುಗಳು

  • ಮುಂಬೈನಲ್ಲಿ ಸರಾಸರಿ 9.5 ಸೆ.ಮೀ. ಮಳೆ ದಾಖಲು: ಐಎಂಡಿ

ವ್ಯಾಪಕ ಮಳೆಯಿಂದಾಗಿ ನವಿ ಮುಂಬೈನಲ್ಲಿ ಭೂಕುಸಿತ ಉಂಟಾದ ಸ್ಥಳದಲ್ಲಿ ವ್ಯಾನ್ ಹಾಗೂ ದ್ವಿಚಕ್ರ ವಾಹನಗಳು ಉರುಳಿಬಿದ್ದವು –ಪಿಟಿಐ ಚಿತ್ರ
  • ಕೇರಳದ ಮಲಪ್ಪುರಂ ಥೆನ್ನಲದಲ್ಲಿ 21 ಸೆಂ.ಮೀ. ಮಳೆ

  • ವಡಕ್ಕರದಲ್ಲಿ 18 ಸೆಂ.ಮೀ. ಕಾಸರಗೋಡು, ಕಣ್ಣೂರಿನಲ್ಲಿ 16 ಸೆಂ.ಮೀ. ಮಳೆ

  • ಇಡುಕ್ಕಿಯಲ್ಲಿ ಗಂಟೆಗೆ 80 ಕಿ.ಮೀ. ವಯನಾಡ್‌–ಕೊಟ್ಟಾಯಂನಲ್ಲಿ ಗಂಟೆಗೆ 61 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.