ADVERTISEMENT

ದೆಹಲಿ ಪ್ರವೇಶಿಸದಂತೆ ತಡೆದ ಪೊಲೀಸರು: ರಾಜಸ್ಥಾನ ಕಾಂಗ್ರೆಸ್‌ ಮುಖ್ಯಸ್ಥ ಆರೋಪ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 14:33 IST
Last Updated 14 ಜೂನ್ 2022, 14:33 IST
ದೆಹಲಿ ಗಡಿಯಲ್ಲಿ ಪೊಲೀಸರಿಂದ ಪ್ರವೇಶ ನಿರಾಕಸಿದ ಕುರಿತು ಟ್ವೀಟ್‌ನಲ್ಲಿ ಗೋವಿಂದ ಸಿಂಗ್‌ ದೊತಸ್ರಾ ಹಂಚಿಕೊಂಡಿರುವ ಚಿತ್ರ
ದೆಹಲಿ ಗಡಿಯಲ್ಲಿ ಪೊಲೀಸರಿಂದ ಪ್ರವೇಶ ನಿರಾಕಸಿದ ಕುರಿತು ಟ್ವೀಟ್‌ನಲ್ಲಿ ಗೋವಿಂದ ಸಿಂಗ್‌ ದೊತಸ್ರಾ ಹಂಚಿಕೊಂಡಿರುವ ಚಿತ್ರ   

ಜೈಪುರ: ರಾಷ್ಟ್ರ ರಾಜಧಾನಿ ಪ್ರವೇಶಿಸಲು ದೆಹಲಿ ಪೊಲೀಸರು ಅವಕಾಶ ನೀಡಲಿಲ್ಲ ಎಂದು ರಾಜಸ್ಥಾನ ಕಾಂಗ್ರೆಸ್‌ ಮುಖ್ಯಸ್ಥ ಗೋವಿಂದ ಸಿಂಗ್‌ ದೊತಸ್ರಾ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್‌ ನೀಡಿದ್ದನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಗೋವಿಂದ ಸಿಂಗ್‌ ಹಾಗೂ ಬೆಂಬಲಿಗರು ಮುಂದಾಗಿದ್ದರು.

ಗುರುಗ್ರಾಮಕ್ಕೆ ತಲುಪಿದಾಗ ಗಡಿ ದಾಟದಂತೆ ದೆಹಲಿ ಪೊಲೀಸರು ನನ್ನನ್ನು ಮತ್ತು ಬೆಂಬಲಿಗರನ್ನು ತಡೆದರು. ಬಳಿಕ ವಸಂತ ಕುಂಜ್‌ ಪೊಲೀಸ್‌ ಠಾಣೆಯ ಸಮೀಪ ಗುರುತು ಪತ್ತೆಹಚ್ಚಲು ಸಾಧ್ಯವಾಗದ ಪ್ರದೇಶದಲ್ಲಿ ಬಂಧಿಸಿ ಇರಿಸಿದ್ದರು ಎಂದು ಗೋವಿಂದ ಸಿಂಗ್‌ ಹೇಳಿದ್ದಾರೆ.

ADVERTISEMENT

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ರಾಜಸ್ಥಾನದ ಜನರು ದೆಹಲಿಗೆ ಪ್ರವೇಶಿಸಲು ಮತ್ತು ಹಿಂತಿರುಗಲು ಅವಕಾಶ ನೀಡುತ್ತಿಲ್ಲ. ರಾಹುಲ್‌ ಗಾಂಧಿ ಅವರು ಭೀತರಾಗಿಲ್ಲ ಹಾಗೂ ಆಗುವುದೂ ಇಲ್ಲ. ಸತ್ಯ ಯಾವತ್ತಿದ್ದರೂ ಮೇಲುಗೈ ಸಾಧಿಸುತ್ತದೆ ಎಂದಿದ್ದಾರೆ.

ಈ ಕುರಿತು ದೆಹಲಿ ಪೊಲೀಸರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.