ADVERTISEMENT

ರಾಜ್‌ ಕುಮಾರ್‌ ಗೋಯಲ್‌ ನೂತನ ಮುಖ್ಯ ಮಾಹಿತಿ ಆಯುಕ್ತ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 14:06 IST
Last Updated 13 ಡಿಸೆಂಬರ್ 2025, 14:06 IST
ರಾಜ್‌ ಕುಮಾರ್ ಗೋಯಲ್‌
ರಾಜ್‌ ಕುಮಾರ್ ಗೋಯಲ್‌   

ನವದೆಹಲಿ: ಕೇಂದ್ರ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರನ್ನಾಗಿ (ಸಿಐಸಿ) ಮಾಜಿ ಕಾನೂನು ಕಾರ್ಯದರ್ಶಿ ರಾಜ್‌ ಕುಮಾರ್‌ ಗೋಯಲ್‌ ಅವರನ್ನು ನೇಮಕ ಮಾಡಲಾಗಿದೆ. ಇವರೊಂದಿಗೆ 8 ಆಯುಕ್ತರನ್ನೂ ನೇಮಿಸಲಾಗಿದೆ.

ಆಯೋಗದಲ್ಲಿ ಖಾಲಿ ಇದ್ದ ಎಲ್ಲ ಸ್ಥಾನಗಳು ಕಳೆದ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭರ್ತಿಯಾಗಿವೆ. ಇದೇ ಸೆಪ್ಟೆಂಬರ್‌ನಲ್ಲಿ ನಿವೃತ್ತರಾದ ಹೀರಾಲಾಲ್‌ ಸಮಾರಿಯಾ ಅವರ ಬಳಿಕ ಆಯೋಗಕ್ಕೆ ಮುಖ್ಯ ಮಾಹಿತಿ ಆಯುಕ್ತರೇ ಇಲ್ಲದಂತಾಗಿತ್ತು. ಈವರೆಗೆ ಆಯೋಗದಲ್ಲಿ ಇಬ್ಬರೇ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದರು.

ಸೋಮವಾರ ಬೆಳಿಗ್ಗೆ 11 ಗಂಟೆಗೆ ಗೋಯಲ್‌ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಬಳಿಕ, ಗೋಯಲ್‌ ಅವರು 8 ಆಯುಕ್ತರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಆಯ್ಕೆ ಸಮಿತಿಯು ಖಾಲಿ ಇದ್ದ ಹುದ್ದೆಗಳಿಗೆ ನೇಮಕಾತಿ ಮಾಡಿದೆ. ಸಮಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಇದ್ದರು.

‘ಆಯುಕ್ತರ ಆಯ್ಕೆಯಲ್ಲಿ ಬಹುಜನ ಸಮಾಜಕ್ಕೆ ಮನ್ನಣೆ ನೀಡಲಾಗಿಲ್ಲ’ ಎಂದು ರಾಹುಲ್‌ ತಮ್ಮ ಆಕ್ಷೇಪ ಮುಂದಿಟ್ಟಿದ್ದರು. ಆದರೆ, ಈ ಆಕ್ಷೇಪವನ್ನು ಕೇಂದ್ರ ತಳ್ಳಿ ಹಾಕಿದೆ. ಹೀರಾಲಾಲ್‌ ಅವರು ದಲಿತ ಸಮುದಾಯಕ್ಕೆ ಸೇರಿದ ಮೊದಲ ಮುಖ್ಯ ಮಾಹಿತಿ ಆಯುಕ್ತರಾಗಿದ್ದರು.

ಮೂವರು ಮಹಿಳಾ ಆಯುಕ್ತರು

ರೈಲ್ವೆ ಮಂಡಳಿಯ ಮಾಜಿ ಮುಖ್ಯಸ್ಥೆ ಜಯಾ ವರ್ಮಾ ಸಿನ್ಹಾ ಪೆಟ್ರೊಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಕ ಮಂಡಳಿಯ ಸದಸ್ಯರಾಗಿದ್ದ ಸುಧಾ ರಾಣಿ ರೇಲಂಗಿ ಅವರನ್ನು ಹೊಸದಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಆಯೋಗದಲ್ಲಿ ಸದ್ಯ ಮೂವರು ಮಹಿಳಾ ಮಾಹಿತಿ ಆಯುಕ್ತರಾಗಿದ್ದಾರೆ. 

ಸತರ್ಕ್‌ ನಾಗರಿಕ್‌ ಸಂಘಟನ್‌ ಅವರ ಅಧ್ಯಯನದ ಪ್ರಕಾರ ಮಾಹಿತಿ ಆಯುಕ್ತರಲ್ಲಿ ನೇಮಕವಾಗುವ ಒಟ್ಟು ಅಧಿಕಾರಿಗಳ ಪೈಕಿ ಶೇ 9ರಷ್ಟು ಮಾತ್ರ ಮಹಿಳೆಯಾಗಿರುತ್ತಾರೆ.

ಅರ್ಧದಷ್ಟು ಮಂದಿ ಅಧಿಕಾರಿ ವರ್ಗದವರು: ಆಯೋಗಕ್ಕೆ ನೇಮಕವಾಗಿರುವವರಲ್ಲಿ ಅರ್ಧದಷ್ಟು ಮಂದಿ ಮಾಜಿ ಅಧಿಕಾರಿಗಳಾಗಿದ್ದಾರೆ. ಮಾಹಿತಿ ಆಯುಕ್ತರಾಗಿ ನೇಮಕವಾಗುವವರಲ್ಲಿ ಶೇ 58ರಷ್ಟು ಮಂದಿ ಸರ್ಕಾರದ ನಿವೃತ್ತ ಅಧಿಕಾರಿಗಳಾಗಿರುತ್ತಾರೆ ಎಂದು ಇದೇ ಸಂಘಟನೆಯ ಅ‌ಧ್ಯಯನ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.