ADVERTISEMENT

MVAಗೆ ರಾಜ್ ಠಾಕ್ರೆ ಸೇರ್ಪಡೆ | ದೇಶದ ಹಿತಕ್ಕಾಗಿ ಕೈಜೋಡಿಸುವುದು ತಪ್ಪಲ್ಲ: ಸುಳೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 11:31 IST
Last Updated 15 ಅಕ್ಟೋಬರ್ 2025, 11:31 IST
<div class="paragraphs"><p>ರಾಜ್‌ ಠಾಕ್ರೆ, ಸುಪ್ರಿಯಾ ಸುಳೆ</p></div>

ರಾಜ್‌ ಠಾಕ್ರೆ, ಸುಪ್ರಿಯಾ ಸುಳೆ

   

ಪುಣೆ: ‘ರಾಷ್ಟ್ರದ ಹಿತಕ್ಕಾಗಿ ನಿನ್ನೆ ವಿರೋಧಿಗಳಾಗಿದ್ದವರು ಇಂದು ಕೈಜೋಡಿಸಿದರೆ ತಪ್ಪಲ್ಲ’ ಎಂದು ಎನ್‌ಸಿಪಿ (ಶರದ್‌ ಪವಾರ್) ನಾಯಕಿ ಸುಪ್ರಿಯಾ ಸುಳೆ ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರದ ವಿರೋಧ ಪಕ್ಷಗಳ ಒಕ್ಕೂಟವಾದ ಮಹಾ ವಿಕಾಸ ಅಘಾಡಿಯಲ್ಲಿ (MVA) ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಸೇರ್ಪಡೆ ವಿಷಯ ಕುರಿತಂತೆ ಅವರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಎಂಎನ್‌ಎಸ್‌ ಅನ್ನು ಎಂವಿಎನಲ್ಲಿ ವಿಲೀನಗೊಳಿಸಲು ಒಕ್ಕೂಟದ ಮುಖಂಡರು ಉತ್ಸಾಹ ತೋರಲಿದ್ದಾರೆ ಎಂಬ ವಿಶ್ವಾಸವಿದೆ. ಆದರೆ ಈ ಕುರಿತು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಇವೆಲ್ಲವೂ ಪ್ರಮುಖ ರಾಜಕೀಯ ನಿರ್ಧಾರಗಳಾಗಿದ್ದು, ಅವುಗಳನ್ನು ಕ್ಯಾಮೆರಾ ಮುಂದೆ ನಿರ್ಧರಿಸಲಾಗದು’ ಎಂದಿದ್ದಾರೆ.

ಮತದಾರರ ಪಟ್ಟಿ ಮತ್ತು ಚುನಾವಣೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿ ಎಸ್. ಚೊಕ್ಕಲಿಂಗಮ್ ಅವರನ್ನು ಭೇಟಿಯಾದ ನಿಯೋಗದಲ್ಲಿ ಶರದ್ ಪವಾರ್ ಮತ್ತು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಜತೆ ರಾಜ್‌ ಠಾಕ್ರೆ ಅವರೂ ಇದ್ದಿದ್ದು ಸುದ್ದಿಯಾದ ನಂತರ ಸುಪ್ರಿಯಾ ಸುಳೆ ಅವರು ಈ ಹೇಳಿಕೆ ನೀಡಿದ್ದಾರೆ.

ಒಕ್ಕೂಟದಲ್ಲಿ ಕಾಂಗ್ರೆಸ್‌ ಜತೆ ಸೇರುವುದಾಗಿ ಎಂಎನ್‌ಎಸ್ ಬಯಸುತ್ತಿದೆ ಎಂದು ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವುತ್ ಅವರು ಸೋಮವಾರ ಹೇಳಿದ್ದರು. ಆದರೆ ಎಂಎನ್‌ಎಸ್‌ ಜತೆ ಕೈಜೋಡಿಸುವ ಪ್ರಸ್ತಾವವನ್ನು ರಾಜ್ಯ ಕಾಂಗ್ರೆಸ್ ಘಟಕ ತಿರಸ್ಕರಿಸಿತು. ಎಂವಿಎ ಒಕ್ಕೂಟದಲ್ಲಿ ಶಿವಸೇನಾ (ಯುಬಿಟಿ), ಕಾಂಗ್ರೆಸ್ ಹಾಗೂ ಎನ್‌ಸಿಪಿ (ಎಸ್‌ಪಿ) ಇವೆ. 

ಮಹಾವಿಕಾಸ ಅಘಾಡಿ ಸರ್ಕಾರ ಇದ್ದಾಗ ಪರಾರಿಯಾದ ಗ್ಯಾಂಗ್‌ಸ್ಟರ್‌ ನೀಲೇಶ್ ಘಾಯ್‌ವಾಲ್‌ ಪಾಸ್‌ಪೋರ್ಟ್‌ ವಿವಾದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಪ್ರಿಯಾ, ‘ಪಾಸ್‌ಪೋರ್ಟ್ ವಿತರಿಸುವುದು ವಿದೇಶಾಂಗ ವ್ಯವಹಾರಗಳ ಇಲಾಖೆಯ ಕೆಲಸವೇ ಹೊರತು, ಪೊಲೀಸರದ್ದಲ್ಲ. ಪಾಸ್‌ಪೋರ್ಟ್‌ ಹೇಗೆ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಜತೆಗೆ ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ ಯಾರು ಅಧಿಕಾರದಲ್ಲಿ ಇದ್ದಾರೆ ಎಂಬ ಮಾಹಿತಿಯೂ ಎಲ್ಲರಿಗೂ ಇದೆ’ ಎಂದು ಖಡಕ್ ತಿರುಗೇಟು ನೀಡಿದ್ದಾರೆ.

ಘಾಯ್‌ವಾಲ್ ವಿರುದ್ಧ ಹಲವು ಗಂಭೀರ ಸ್ವರೂಪದ ಪ್ರಕರಣಗಳಿವೆ. ವಂಚಿಸಿ ಪಾಸ್‌ಪೋರ್ಟ್‌ ಪಡೆದ ಈತ ದೇಶದಿಂದ ಪಲಾಯನ ಮಾಡಿದ್ದಾನೆ. ಲುಕ್‌ಔಟ್ ನೋಟಿಸ್‌ ಜಾರಿಗೊಳಿಸಿರುವುದಾಗಿ ಪುಣೆ ಪೊಲೀಸರು ಹೇಳಿದ್ದಾರೆ. ಹಲವು ಪ್ರಕರಣಗಳಿದ್ದರೂ, ಈತನಿಗೆ ಪಾಸ್‌ಪೋರ್ಟ್‌ ಹೇಗೆ ಸಿಕ್ಕಿತು ಎಂಬ ವಿಷಯ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.