ಮುಂಬೈ/ಪಂಢರಪುರ: ‘ರಾಜ್ಯದ ಮೇಲೆ ತ್ರಿಭಾಷಾ ಸೂತ್ರವನ್ನು ಹೇರುವುದರ ಹಿಂದೆ ಮುಂಬೈ ನಗರವನ್ನು ಮಹಾರಾಷ್ಟ್ರದಿಂದ ಬೇರ್ಪಡಿಸುವ ಹುನ್ನಾರ ಅಡಗಿದೆ. ಮರಾಠಿ ಜನರ ಒಗ್ಗಟ್ಟಿನ ಕಾರಣದಿಂದ ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿಯಿತು’ ಎಂದು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಶನಿವಾರ ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹಿಂದಿ ಭಾಷೆಯನ್ನು ಕಲಿಸುವ ಬಗ್ಗೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿತ್ತು. ಭಾರಿ ವಿರೋಧ ವ್ಯಕ್ತವಾದ ಕಾರಣ ಈ ಆದೇಶವನ್ನು ಸರ್ಕಾರ ಹಿಂಪಡೆಯಿತು. ಈ ಬಗ್ಗೆ ಎಂಎನ್‌ಎಸ್ ಮತ್ತು ಶಿವಸೇನೆ (ಉದ್ಧವ್ ಬಣ) ಪಕ್ಷಗಳು ವರ್ಲಿಯಲ್ಲಿ ‘ವಿಜಯ’ ರ್‍ಯಾಲಿಯನ್ನು ಆಯೋಜಿಸಿದ್ದವು.
ರ್‍ಯಾಲಿಯಲ್ಲಿ ಮಾತನಾಡಿದ ರಾಜ್, ‘ಭಾಷೆ ಕುರಿತ ವಿವಾದದ ಬಳಿಕ ಸರ್ಕಾರವು ಜಾತಿ ಹೆಸರಿನಲ್ಲಿ ಜನರನ್ನು ವಿಭಜಿಸಲು ಮುಂದಾಗುತ್ತದೆ. ವಿಭಜನೆ ಮತ್ತು ಆಡಳಿತ– ಇವೇ ಬಿಜೆಪಿಯ ಮೂಲಮಂತ್ರ’ ಎಂದರು.
‘ಹಿಂದೂ ಹಾಗೂ ಮುಸ್ಲಿಮರನ್ನು ವಿಭಜಿಸಲು ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯು ‘ವಿಭಜನೆಗೊಂಡರೆ ನಾಶವಾಗುತ್ತೇವೆ’ (ಬಟೇಂಗೆ ತೋ ಕಟೇಂಗೆ) ಘೋಷಣೆ ರೂಪಿಸಿತ್ತು. ಮರಾಠಿ ಜನರು ತಮ್ಮೊಳಗೇ ಜಗಳವಾಡಿಕೊಂಡಿದ್ದರಿಂದಲೇ ರಾಜ್ಯದಲ್ಲಿ ದೆಹಲಿಯ ಗುಲಾಮರು ಅಧಿಕಾರ ಹಿಡಿದರು’ ಎಂದು ವಾಗ್ದಾಳಿ ನಡೆಸಿದರು.
ಬದಲಾಗುತ್ತಿರುವ ರಾಜಕೀಯ ಲೆಕ್ಕಾಚಾರ
20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ಧವ್ ಠಾಕ್ರೆ ಅವರು ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದಾರೆ. ರ್‍ಯಾಲಿಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ‘ಒಟ್ಟಿಗೆ ಚುನಾವಣೆ ಎದುರಿಸುತ್ತೇವೆ’ ಎಂದು ಉದ್ಧವ್ ಅವರು ಹೇಳುತ್ತಿದ್ದಂತೆಯೇ ಕಾರ್ಯಕರ್ತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
ರಾಜ್ ಅವರು ಮಗ ಅಮಿತ್ ಠಾಕ್ರೆ ಹಾಗೂ ಉದ್ಧವ್ ಅವರ ಮಗ ಆದಿತ್ಯ ಠಾಕ್ರೆ ಕೂಡ ಇದೇ ಮೊದಲ ಬಾರಿಗೆ ವೇದಿಕೆ ಹಂಚಿಕೊಂಡರು. ಎನ್‌ಸಿಪಿ (ಶರದ್ ಬಣ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಸೇರಿದಂತೆ ಹಲವು ನಾಯಕರು ರ್‍ಯಾಲಿಯಲ್ಲಿ ಉಪಸ್ಥಿತರಿದ್ದರೂ ರಾಜ್ ಮತ್ತು ಉದ್ಧವ್ ಮಾತ್ರವೇ ವೇದಿಕೆ ಮೇಲಿದ್ದರು. ಇಬ್ಬರೂ ಸಹೋದರರು ಒಟ್ಟಿಗೆ ಸೇರಿರುವುದು ಎರಡೂ ಪಕ್ಷಗಳಿಗೆ ಹೊಸ ಹುರುಪು ನೀಡುತ್ತದೆ. ಚುನಾವಣೆಯಲ್ಲಿ ಅನುಕೂಲವೂ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರೇ ನನ್ನನ್ನು ಮತ್ತು ಉದ್ಧವ್ ಅನ್ನು ಒಂದುಗೂಡಿಸಿದ್ದಾರೆ. ಬಾಳಾ ಸಾಹೇಬ್ ಠಾಕ್ರೆ ಅವರಿಗೂ ಇದು ಸಾಧ್ಯವಾಗಿರಲಿಲ್ಲ.ರಾಜ್ ಠಾಕ್ರೆ, ಎಂಎನ್‌ಎಸ್ ಮುಖ್ಯಸ್ಥ
ಇದೊಂದು ವಿಜಯ ರ್‍ಯಾಲಿ ಎಂದು ನನಗೆ ಹೇಳಲಾಗಿತ್ತು. ಆದರೆ ಇದು ‘ರುಡಾಲಿ’ ಭಾಷಣದಂತಾಯಿತು.ದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ (ಪ್ರಬಲ ಜಾತಿಗಳು ತಮ್ಮ ಮನೆಯಲ್ಲಿ ಸಾವಾದಾಗ ಅಳುವುದಕ್ಕಾಗಿಯೇ ಮಹಿಳೆಯರನ್ನು ನೇಮಿಸುತ್ತಾರೆ. ಇವರನ್ನು ರುಡಾಲಿ ಎನ್ನಲಾಗುತ್ತದೆ. ರಾಜಸ್ಥಾನದಲ್ಲಿ ಈ ಆಚರಣೆ ಇದೆ)
ಒಟ್ಟಿಗೆ ಇರಲೆಂದೇ ನಾವು ಈಗ ಒಂದುಗೂಡಿದ್ದೇವೆ. ಮುಂಬೈನ ಪಾಲಿಕೆ ಚುನಾವಣೆಯಲ್ಲಿ ಮತ್ತು ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಿ ಅಧಿಕಾರ ಹಿಡಿಯುತ್ತೇವೆ.ಉದ್ಧವ್ ಠಾಕ್ರೆ, ಶಿನಸೇನೆ (ಉದ್ಧವ್ ಬಣ) ಮುಖ್ಯಸ್ಥ
ರಾಜಕಾರಣದಲ್ಲಿ ತಮ್ಮ ಭವಿಷ್ಯವನ್ನು ಭದ್ರ ಮಾಡಿಕೊಳ್ಳುವ ಹತಾಶ ಯತ್ನವಿದು. ರ್‍ಯಾಲಿಯು ಕುಟುಂಬದ ಪುನರ್ಮಿಲನಂದತ್ತಿತ್ತು.ಬಿಜೆಪಿ
ಆದೇಶವನ್ನು ಸರ್ಕಾರ ಹಿಂಪಡೆದಿದ್ದರ ಕುರಿತು ಸಹೋದರರು ಸಂಭ್ರಮಾಚರಣೆ ಮಾಡಬೇಕೆನ್ನಿಸಿದರೆ ಮಾಡಲಿ. ಸಂಭ್ರಮಾಚರಣೆ ಮಾಡುವುದು ಮತ್ತು ಇಬ್ಬರು ಸಹೋದರರು ಮೈತ್ರಿ ಮಾಡಿಕೊಳ್ಳುವುದು ಎರಡೂ ಬೇರೆ ಬೇರೆ ವಿಚಾರ.ಹರ್ಷವರ್ಧನ್ ಸಪಕಲ್, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.