
ಶಾಜಾಪುರ (ಮಧ್ಯಪ್ರದೇಶ): ಸಮಾಜ ಸುಧಾರಕ ರಾಜರಾಮ್ ಮೋಹನ್ ರಾಯ್ ಅವರನ್ನು ಬ್ರಿಟಿಷ್ ಏಜೆಂಟ್ ಎಂದು ಕರೆದಿದ್ದ ಮಧ್ಯಪ್ರದೇಶ ಸಚಿವ ಹಾಗೂ ಬಿಜೆಪಿ ನಾಯಕ ಇಂದರ್ ಸಿಂಗ್ ಪರ್ಮಾರ್ ಅವರು ಭಾನುವಾರ ಕ್ಷಮೆಯಾಚಿದ್ದಾರೆ.
ರಾಜರಾಮ್ ಮೋಹನ್ ರಾಯ್ ಕುರಿತ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಇಂದರ್ ಸಿಂಗ್, ‘ಬಾಯಿತಪ್ಪಿನಿಂದ ಹೇಳಿಕೆ ನೀಡಿದ್ದು, ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಅವರು ಸಮಾಜ ಸುಧಾರಕರಾಗಿದ್ದು, ಅವರಿಗೆ ಗೌರವ ಸಲ್ಲಬೇಕು’ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಅಗರ್ ಮಾಲ್ವಾದಲ್ಲಿ ನಡೆದಿದ್ದ ಬುಡಕಟ್ಟು ಜನಾಂಗದ ನಾಯಕ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು, ‘ರಾಜರಾಮ್ ಮೋಹನ್ ರಾಯ್ ಅವರು ಬ್ರಿಟಿಷರ ಪರವಾಗಿದ್ದರು. ಭಾರತದಲ್ಲಿ ಧರ್ಮ ಪರಿವರ್ತನೆ ಮಾಡಲು ಬ್ರಿಟಿಷರಿಗೆ ನೆರವಾಗಿದ್ದರು’ ಎಂದು ಹೇಳಿದ್ದರು.
ಬ್ರಿಟಿಷರು ಅವರಿಗೆ ನೆರವಾಗುತ್ತಿದ್ದ ಕೆಲವರನ್ನು ಸಮಾಜ ಸುಧಾರಕ ಎಂದು ಬಿಂಬಿಸುತ್ತಿದ್ದರು. ಅಂತಹ ನಕಲಿ ಸಮಾಜ ಸುಧಾರಕರು ಧರ್ಮ ಪರಿವರ್ತನೆಯನ್ನು ಬೆಂಬಲಿಸುತ್ತಿದ್ದರು. ಬಿರ್ಸಾ ಮುಂಡಾ ಅವರು ಇಂತವರನ್ನು ತಡೆಯುವ ಮೂಲಕ, ಬುಡಕಟ್ಟು ಜನಾಂಗವನ್ನು ರಕ್ಷಿಸಿದ್ದರು ಎಂದಿದ್ದರು.
ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಮಿಷನರಿ ಶಾಲೆಗಳು ಶೈಕ್ಷಣಿಕ ಕೇಂದ್ರಗಳಾಗಿದ್ದವು ಹಾಗೂ ಶಿಕ್ಷಣದ ಮೂಲಕ ಧರ್ಮ ಪರಿವರ್ತನೆಯನ್ನು ಮುಚ್ಚಿಡುವ ಕೆಲಸವನ್ನು ಮಾಡಲಾಗುತ್ತಿತ್ತು ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.