ADVERTISEMENT

ದೇಶ ಒಡೆಯಲು ಬಿಜೆಪಿ ಸೃಷ್ಟಿಸಿದ ಪದ ‘ಲವ್ ಜಿಹಾದ್’: ಅಶೋಕ್ ಗೆಹ್ಲೋಟ್

ಏಜೆನ್ಸೀಸ್
Published 20 ನವೆಂಬರ್ 2020, 8:24 IST
Last Updated 20 ನವೆಂಬರ್ 2020, 8:24 IST
ಅಶೋಕ್ ಗೆಹ್ಲೋಟ್ (ಪಿಟಿಐ ಚಿತ್ರ)
ಅಶೋಕ್ ಗೆಹ್ಲೋಟ್ (ಪಿಟಿಐ ಚಿತ್ರ)   

ಜೈಪುರ:‘ಲವ್ ಜಿಹಾದ್’ ಎಂಬುದು ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಲು ಮತ್ತು ದೇಶವನ್ನು ಒಡೆಯಲು ಬಿಜೆಪಿ ಸೃಷ್ಟಿಸಿದ ಪದ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟೀಕಿಸಿದ್ದಾರೆ.

ಮದುವೆಯೆಂಬುದು ವೈಯಕ್ತಿಕ ನಿರ್ಧಾರವಾಗಿದ್ದು ಬಿಜೆಪಿಯು ಅದಕ್ಕೂ ನಿರ್ಬಂಧ ವಿಧಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

‘ದೇಶವನ್ನು ಒಡೆಯಲು ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಲು ಬಿಜೆಪಿ ಸೃಷ್ಟಿಸಿರುವ ಪದವೇ ‘ಲವ್ ಜಿಹಾದ್’. ಮದುವೆಯೆಂಬುದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರ. ಅದಕ್ಕೆ ನಿರ್ಬಂಧ ವಿಧಿಸಲು ಕಾನೂನು ರೂಪಿಸುವುದು ಅಸಾಂವಿಧಾನಿಕ. ಇದು ಯಾವ ನ್ಯಾಯಾಲಯದಲ್ಲೂ ಒಪ್ಪಿತವಾಗದು. ಪ್ರೀತಿಯಲ್ಲಿ ಜಿಹಾದ್‌ಗೆ ಸ್ಥಾನವಿಲ್ಲ' ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

ADVERTISEMENT

‘ವಯಸ್ಕರ ನಡುವಣ ಸಮ್ಮತಿಗೆ ಸರ್ಕಾರದ ಅನುಮತಿ ಅಗತ್ಯ ಎನ್ನುವಂಥ ವಾತಾವರಣವನ್ನು ಅವರು (ಬಿಜೆಪಿ) ಸೃಷ್ಟಿಸುತ್ತಿದ್ದಾರೆ. ವೈಯಕ್ತಿಕ ನಿರ್ಧಾರವಾದ ಮದುವೆಯ ಮೇಲೆ ಅವರು ನಿರ್ಬಂಧ ವಿಧಿಸುತ್ತಿದ್ದಾರೆ. ಇದು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ' ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಲವ್ ಜಿಹಾದ್ ತಡೆಗೆ ಕಠಿಣ ಕಾನೂನು ರೂಪಿಸುವುದಾಗಿ ಅಲಹಾಬಾದ್ ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇತ್ತೀಚೆಗೆ ಹೇಳಿದ್ದರು. ಲವ್ ಜಿಹಾದ್ ತಡೆ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸುವುದಾಗಿ ಮಧ್ಯಪ್ರದೇಶ ಗೃಹಸಚಿವರೂ ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.