ADVERTISEMENT

ಬಿಸಿಲಿಗೆ ಉತ್ತರ ರಾಜ್ಯಗಳು ತತ್ತರ: ದೆಹಲಿ 47, ರಾಜಸ್ಥಾನ 50 ಡಿಗ್ರಿ ಸೆಲ್ಸಿಯಸ್

ಏಜೆನ್ಸೀಸ್
Published 27 ಮೇ 2020, 2:43 IST
Last Updated 27 ಮೇ 2020, 2:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೊರೊನಾ ಭೀತಿಯಿಂದ ತತ್ತರಿಸಿ ಕಳೆದ ಎರಡು ತಿಂಗಳಿಂದ ಮನೆಗಳಲ್ಲೇ ಬಂಧಿಯಾಗಿರುವ ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ ರಾಜ್ಯಗಳ ಜನತೆಗೆ ಕಳೆದ ಮೂರು ದಿನಗಳಿಂದ ಬೀಸುತ್ತಿರುವ ಬಿಸಿಗಾಳಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಕಳೆದ ವಾರ ದೆಹಲಿಯಲ್ಲಿ 42ರಿಂದ 44 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದ್ದ ತಾಪಮಾನ, ಮಂಗಳವಾರ 47 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಇದು ಪ್ರಸಕ್ತ ಬೇಸಿಗೆಯ ಗರಿಷ್ಠ ತಾಪಮಾನವಾಗಿದೆ. ಈ ಹಿಂದೆ 2010ರಲ್ಲಿ ಪಲಾಂ, 2002ರಲ್ಲಿ ಸಫ್ದರ್‌ಜಂಗ್‌ನಲ್ಲಿ 47 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.

ದೆಹಲಿ ಮಾತ್ರವಲ್ಲದೆ ಹರಿಯಾಣ, ಪಂಜಾಬ್, ರಾಜಸ್ಥಾನ ಸೇರಿದಂತೆ ಸುತ್ತಮುತ್ತಲಿನ ಅನೇಕ ರಾಜ್ಯಗಳಲ್ಲಿ ಬಿಸಿಲಿನ ಬೇಗೆ ಹೆಚ್ಚುತ್ತ ಸಾಗಿದೆ. ರಾಜಸ್ಥಾನದ ಛುರುವಿನಲ್ಲಿ 50 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ADVERTISEMENT

ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌, ವಿದರ್ಭ, ಛತ್ತೀಸ್‌ಗಢ, ಬಿಹಾರ ಹಾಗೂ ದಕ್ಷಿಣದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲೂ ತಾಪಮಾನದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ರಾಜಸ್ಥಾನದ ಬಿಕಾನೇರ್ ಹಾಗೂ ಗಂಗಾನಗರದಲ್ಲಿ 47, ಹರಿಯಾಣದ ಹಿಸ್ಸಾರ್‌ನಲ್ಲಿ 48, ಉತ್ತರ ಪ್ರದೇಶದ ಬಂದ್ವಾದಲ್ಲೂ 48 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ಮುಂದಿನ ಎರಡು ದಿನಗಳವರೆಗೂ ಬಿಸಿಲಿನ ತಾಪ ಮುಂದುವರಿಯಲಿದ್ದು, ಬಿಸಿ ಗಾಳಿ ಬೀಸಲಿದೆ. ತಾಪಮಾನ 50 ಡಿಗ್ರಿ ಸೆಲ್ಸಿಯಸ್‌ ದಾಟಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ ವಾರವಷ್ಟೇ ಸರ್ಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರಿಂದ ಹರ್ಷಚಿತ್ತರರಾಗಿ, ಮನೆಗಳಿಂದ ಹೊರಹೋಗಿ ಮತ್ತೆ ಕೆಲಸ– ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದುಕೊಂಡಿದ್ದ ಜನತೆಗೆ ಬಿಸಿಲಿನ ಬೇಗೆ ಮತ್ತೆ ಮನೆಯಲ್ಲೇ ಇರುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.