ADVERTISEMENT

ಮದುವೆ ವಯಸ್ಸಿಗೆ ಬಾರದ ವಯಸ್ಕರು ‘ಲಿವ್–ಇನ್‌’ಗೆ ಅರ್ಹರು: ರಾಜಸ್ಥಾನ ಹೈಕೋರ್ಟ್‌

ಪಿಟಿಐ
Published 5 ಡಿಸೆಂಬರ್ 2025, 13:50 IST
Last Updated 5 ಡಿಸೆಂಬರ್ 2025, 13:50 IST
   

ಜೈಪುರ: ವಿವಾಹವಾಗಲು ಕಾನೂನುಬದ್ಧ ವಯಸ್ಸು ಆಗದಿದ್ದರೂ ಇಬ್ಬರು ವಯಸ್ಕರು ಸಹ ಜೀವನ ಸಂಬಂಧ ಹೊಂದಲು ಅರ್ಹರು ಎಂದು ರಾಜಸ್ಥಾನ ಹೈಕೋರ್ಟ್‌ ತೀರ್ಪು ನೀಡಿದೆ.

ಸ್ವ ಇಚ್ಛೆಯಿಂದ ಒಟ್ಟಿಗೆ ವಾಸಿಸುತ್ತಿರುವ ಕೋಟಾದ 18ರ ವಯಸ್ಸಿನ ಯುವತಿ ಮತ್ತು 19ರ ವಯಸ್ಸಿನ ಯುವಕ ರಕ್ಷಣೆಗೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನೂಪ್‌ ಧಂಡ್‌ ಅವರು ಈ ತೀರ್ಪು ನೀಡಿದ್ದಾರೆ.

‘ಯುವಕ ಮತ್ತು ಯುವತಿಯು 2025ರ ಅಕ್ಟೋಬರ್‌ 27ರಂದು ಸಹ ಜೀವನ ಕುರಿತು ಒಪ್ಪಂದ ಮಾಡಿಕೊಂಡಿದ್ದೇವೆ’ ಎಂದು ಕೋರ್ಟ್‌ ಗಮನಕ್ಕೆ ತಂದರು.

ADVERTISEMENT

‘ನಮ್ಮ ಸಹ ಜೀವನವನ್ನು ವಿರೋಧಿಸುತ್ತಿರುವ ಯುವತಿಯ ಕುಟುಂಬದವರು, ಕೊಲ್ಲುವ ಬೆದರಿಕೆ ಹಾಕಿದ್ದಾರೆ. ರಕ್ಷಣೆ ಕೋರಿ ಕೋಟಾ ಪೊಲೀಸರಿಗೆ ನೀಡಿದ ದೂರನ್ನು ಅವರು ಪರಿಗಣಿಸಿಲ್ಲ’ ಎಂದು ಅರ್ಜಿದಾರರು ಆರೋಪಿಸಿದರು.

ಈ ಅರ್ಜಿಯನ್ನು ವಿರೋಧಿಸಿದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿವೇಕ್‌ ಚೌಧರಿ, ‘ಯುವಕನಿಗೆ 21 ವಯಸ್ಸಾಗಿಲ್ಲ. ಅಂದರೆ ವಿವಾಹವಾಗುವ ಕಾನೂನುಬದ್ಧ ವಯಸ್ಸಾಗಿಲ್ಲ. ಹೀಗಾಗಿ ಅವರಿಗೆ ಸಹ ಜೀವನ ವ್ಯವಸ್ಥೆಯಲ್ಲಿ ಇರಲು ಅವಕಾಶ ನೀಡಬಾರದು’ ಎಂದು ವಾದಿಸಿದರು.

ಆಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, ‘ಅರ್ಜಿದಾರರು ವಿವಾಹವಾಗುವ ವಯಸ್ಸಿಗೆ ಬಂದಿಲ್ಲ ಎಂಬ ಕಾರಣಕ್ಕೆ, ಅವರಿಗೆ ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ನಿರಾಕರಿಸಲು ಆಗುವುದಿಲ್ಲ’ ಎಂದು ಹೇಳಿದರು.

‘ಕಾನೂನಿನ ಅಡಿ ಸಹ ಜೀವನದ ಸಂಬಂಧಗಳನ್ನು ನಿಷೇಧಿಸಲಾಗಿಲ್ಲ ಅಥವಾ ಅಪರಾಧ ಎಂದೂ ಪರಿಗಣಿಸಿಲ್ಲ. ಹೀಗಾಗಿ ಪ್ರತಿಯೊಬ್ಬರ ಜೀವನ ಮತ್ತು ಸ್ವಾತಂತ್ರ್ಯವನ್ನು ಕಾಪಾಡುವುದು ರಾಜ್ಯದ ಕರ್ತವ್ಯ’ ಎಂದು ಅವರು ತಿಳಿಸಿದರು.  ಅರ್ಜಿದಾರರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವಂತೆ ಜೋಧ್‌ಪುರ (ಗ್ರಾಮೀಣ) ಪೊಲೀಸ್‌ ವರಿಷ್ಠಾಧಿಕಾರಿಗೆ ಅವರು ನಿರ್ದೇಶಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.