ADVERTISEMENT

ರಾಜಸ್ಥಾನ ರಾಜಕೀಯ ಬಿಕ್ಕಟ್ಟು | ಪೈಲಟ್‌ ಸಂಚಿನ ಪುರಾವೆ ಇದೆ: ಅಶೋಕ್‌ ಗೆಹ್ಲೋಟ್‌

ಪಿಟಿಐ
Published 15 ಜುಲೈ 2020, 20:39 IST
Last Updated 15 ಜುಲೈ 2020, 20:39 IST
ಕಾಂಗ್ರೆಸ್‌ನ ಬಂಡಾಯ ಮುಖಂಡ ಸಚಿನ್‌ ಪೈಲಟ್‌ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ (ಸಂಗ್ರಹ ಚಿತ್ರ)
ಕಾಂಗ್ರೆಸ್‌ನ ಬಂಡಾಯ ಮುಖಂಡ ಸಚಿನ್‌ ಪೈಲಟ್‌ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ (ಸಂಗ್ರಹ ಚಿತ್ರ)   

ಜೈಪುರ: ತಮ್ಮ ನೇತೃತ್ವದ ಸರ್ಕಾರ ಉರುಳಿಸುವುದಕ್ಕಾಗಿ ಕಾಂಗ್ರೆಸ್‌ನ ಬಂಡಾಯ ಮುಖಂಡ ಸಚಿನ್‌ ಪೈಲಟ್‌ ಅವರು ಬಿಜೆಪಿ ಜತೆಸೇರಿ ಶಾಸಕರ ಖರೀದಿ ಸಂಚು ನಡೆಸಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಆರೋಪಿಸಿದ್ದಾರೆ.

ಗೆಹ್ಲೋಟ್‌ ವಿರುದ್ಧ ಬಂಡಾಯ ಎದ್ದ ಪೈಲಟ್‌ ಅವರನ್ನು ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಮಂಗಳವಾರ ವಜಾ ಮಾಡಲಾಗಿದೆ.

‘ಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರೇ ನೇರವಾಗಿ ವ್ಯವಹಾರ ನಡೆಸಿದ್ದಾರೆ’ ಎಂದು ಗೆಹ್ಲೋಟ್‌ ಹೇಳಿದ್ದಾರೆ.

ADVERTISEMENT

‘ಶಾಸಕರ ಖರೀದಿ ನಡೆಸಲು ಯತ್ನಿಸಿದ್ದಕ್ಕೆ ನಮ್ಮಲ್ಲಿ ಪುರಾವೆ ಇದೆ. ಹಣ ವರ್ಗಾವಣೆಯೂ ಆಗಿದೆ. ಏನೂ ಆಗಿಯೇ ಇಲ್ಲ ಎಂದು ಸ್ಪಷ್ಟೀಕರಣ ಕೊಟ್ಟವರು ಯಾರು? ಸಂಚಿನ ಭಾಗವಾಗಿದ್ದವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ’ ಎಂದು ಅವರು ಹೇಳಿದರು.

ಅನರ್ಹತೆ: ಪೈಲಟ್‌ ಮತ್ತು ಅವರ ಬೆಂಬಲಿಗರಾದ 18 ಶಾಸಕರಿಗೆ ಸಭಾಧ್ಯಕ್ಷ ಸಿ.ಪಿ.ಜೋಶಿ, ಅನರ್ಹತೆಯ ನೋಟಿಸ್‌ ಜಾರಿ ಮಾಡಿದ್ದಾರೆ.

‘ಪೈಲಟ್‌ ಅವರಿಗೆ ಪಕ್ಷದ ಬಾಗಿಲು ಮುಚ್ಚಿಲ್ಲ. ಅವರು ಬಿಜೆಪಿಯ ಭ್ರಮಾತ್ಮಕ ಬಲೆಯಿಂದ ಹೊರಗೆ ಬರುವುದಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ರಾಜಸ್ಥಾನ ಕಾಂಗ್ರೆಸ್‌ನ ಉಸ್ತುವಾರಿ ಹೊತ್ತಿರುವ ಅವಿನಾಶ್‌ ಪಾಂಡೆ ಟ್ವೀಟ್‌ ಮಾಡಿದ್ದಾರೆ.

ತಳಮಟ್ಟದಲ್ಲೂ ಸಂಕಷ್ಟ
ರಾಜಸ್ಥಾನ ಕಾಂಗ್ರೆಸ್‌ನ ಜಿಲ್ಲಾ ಮತ್ತು ತಾಲ್ಲೂಕು ಸಮಿತಿಗಳೆಲ್ಲವನ್ನೂ ಬರ್ಖಾಸ್ತು ಮಾಡಲಾಗಿದೆ. ಪಕ್ಷದ ತಳಮಟ್ಟದ ಪದಾಧಿಕಾರಿ ಸ್ಥಾನಗಳಲ್ಲಿ ಇರುವ ಪೈಲಟ್‌ ಬೆಂಬಲಿಗರನ್ನು ಹೊರಗೆ ಅಟ್ಟುವುದು ಇದರ ಉದ್ದೇಶ ಎಂದು ಮೂಲಗಳು ಹೇಳಿವೆ.

**

ಚಂದ ಇಂಗ್ಲಿಷ್‌ ಮಾತನಾಡುವುದು ಅಥವಾ ಹೇಳಿಕೆ ಕೊಡುವುದು ಎಲ್ಲವೂ ಅಲ್ಲ. ಹೃದಯದಲ್ಲಿ ಏನಿದೆ, ನಿಮ್ಮ ಬದ್ಧತೆ ಏನು ಎಂಬುದೆಲ್ಲವೂ ಈಗ ಬಯಲಾಗಿದೆ.
-ಅಶೋಕ್‌ ಗೆಹ್ಲೋಟ್‌, ರಾಜಸ್ಥಾನ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.