ADVERTISEMENT

ರಾಜಸ್ಥಾನ ರಾಜಕೀಯ; ಸಚಿನ್‌ ಪೈಲಟ್‌ ಬಂಡಾಯ ಶಮನ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 19:59 IST
Last Updated 10 ಆಗಸ್ಟ್ 2020, 19:59 IST
ಸಚಿನ್‌ ಪೈಲಟ್‌
ಸಚಿನ್‌ ಪೈಲಟ್‌    

ನವದೆಹಲಿ:ರಾಜಸ್ಥಾನ ಕಾಂಗ್ರೆಸ್‌ ಘಟಕದಲ್ಲಿ ಸೃಷ್ಟಿಯಾಗಿದ್ದ ಬಿಕ್ಕಟ್ಟು ಬಂಡಾಯ ನಾಯಕ ಸಚಿನ್‌ ಪೈಲಟ್‌ ಅವರು ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸೋಮವಾರ ಭೇಟಿ ಮಾಡುವುದರೊಂದಿಗೆ ಶಮನವಾಗಿದೆ. ಪಕ್ಷ ಮತ್ತು ರಾಜಸ್ಥಾನ ಸರ್ಕಾರದ ಹಿತಾಸಕ್ತಿಯ ಪರ ಕೆಲಸ ಮಾಡುವುದಾಗಿ ಪೈಲಟ್‌ ಮಾತು ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ ಮುಖಂಡರ ಜತೆಗೆ ಹಲವು ಸುತ್ತಿನ ಅನೌಪಚಾರಿಕ ಮಾತುಕತೆ ಬಳಿಕ ಪೈಲಟ್‌ ಅವರು ರಾಹುಲ್‌ ಮತ್ತು ಪ್ರಿಯಾಂಕಾ ಅವರನ್ನು ಭೇಟಿಯಾಗಿದ್ದಾರೆ. ಅಶೋಕ್‌ ಗೆಹ್ಲೋಟ್‌ ನೇತೃತ್ವದ ರಾಜಸ್ಥಾನ ಸರ್ಕಾರವನ್ನು ಪತನದ ಅಂಚಿಗೆ ದೂಡಿದ್ದ ಬಂಡಾಯವು ಈ ಭೇಟಿಯಿಂದಾಗಿ ಕೊನೆಗೊಂಡಿದೆ.

ಪೈಲಟ್‌ ಮತ್ತು ಅವರ ಜತೆಗಿರುವ ಶಾಸಕರ ದೂರುಗಳ ಬಗ್ಗೆ ಗಮನ ಹರಿಸುವುದಕ್ಕಾಗಿ ಮೂವರು ಸದಸ್ಯರ ಸಮಿತಿ ರಚಿಸಲು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹೇಳಿದ್ದಾರೆ.

ADVERTISEMENT

ಈ ವಾರ ನಡೆಯಲಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಪೈಲಟ್‌ ಮತ್ತು ಅವರ ಬೆಂಬಲಿಗ ಶಾಸಕರು ಭಾಗವಹಿಸಲಿದ್ದಾರೆ. ಶುಕ್ರವಾರ ಆರಂಭವಾಗಲಿರುವ ರಾಜಸ್ಥಾನ ವಿಧಾನಸಭಾ ಅಧಿವೇಶನದಲ್ಲಿ ಗೆಹ್ಲೋಟ್‌ ಅವರು ವಿಶ್ವಾಸಮತ ಕೋರಿದರೆ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದು ವೇಣುಗೋಪಾಲ್‌ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪೈಲಟ್‌ ಜತೆಗೆ ಗುರುತಿಸಿಕೊಂಡಿದ್ದ ಶಾಸಕ ಭನ್ವರ್‌ಲಾಲ್‌ ಶರ್ಮಾ ಅವರು ಜೈಪುರಕ್ಕೆ ಧಾವಿಸಿ, ಗೆಹ್ಲೋಟ್‌ ಅವರನ್ನು ಭೇಟಿಯಾಗಿದ್ದಾರೆ. ‘ನಮ್ಮೆಲ್ಲ ದೂರುಗಳು ಪರಿಹಾರವಾಗಿವೆ. ಗೆಹ್ಲೋಟ್‌ ಅವರು ನಮ್ಮ ನಾಯಕ. ಐದು ವರ್ಷದ ಪೂರ್ಣ ಅವಧಿಗೆ ಅವರು ಮುಖ್ಯಮಂತ್ರಿಯಾಗಿ ಇರಲಿದ್ದಾರೆ’ ಎಂದು ಶರ್ಮಾ ಹೇಳಿದ್ದಾರೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರ ಜತೆ ಸೇರಿ ರಾಜಸ್ಥಾನ ಸರ್ಕಾರ ಉರುಳಿಸಲು ಶರ್ಮಾ ಸಂಚು ನಡೆಸಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಬಗ್ಗೆ ಅವರಿಬ್ಬರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಧ್ವನಿಸುರುಳಿಯನ್ನೂ ಬಿಡುಗಡೆ ಮಾಡಿತ್ತು.

ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿದ್ದ ಪೈಲಟ್‌ ಅವರು ಗೆಹ್ಲೋಟ್‌ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಜುಲೈ 13ರಿಂದ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಪೈಲಟ್‌ ಮತ್ತು ಅವರ ಜತೆಗೆ ಗುರುತಿಸಿಕೊಂಡಿದ್ದ ಇಬ್ಬರು ಸಚಿವರನ್ನು ಜುಲೈ 14ರಂದು ವಜಾ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.