ADVERTISEMENT

ನೌಕಾಪಡೆಗೆ ‘ಹಿಮಗಿರಿ’, ‘ಉದಯಗಿರಿ’ ಸೇರ್ಪಡೆ

ಪಿಟಿಐ
Published 26 ಆಗಸ್ಟ್ 2025, 14:34 IST
Last Updated 26 ಆಗಸ್ಟ್ 2025, 14:34 IST
ಐಎನ್‌ಎಸ್‌ ಉದಯಗಿರಿ
ಐಎನ್‌ಎಸ್‌ ಉದಯಗಿರಿ   

ವಿಶಾಖಪಟ್ಟಣ(ಆಂಧ್ರಪ್ರದೇಶ): ರಹಸ್ಯವಾಗಿ ಕಾರ್ಯಾಚರಣೆ ಮಾಡುವ ಸಾಮರ್ಥ್ಯ ಹೊಂದಿರುವ, ‘ಐಎನ್‌ಎಸ್‌ ಉದಯಗಿರಿ’ ಹಾಗೂ ‘ಐಎನ್‌ಎಸ್‌ ಹಿಮಗಿರಿ’ ಯುದ್ಧನೌಕೆಗಳನ್ನು ಮಂಗಳವಾರ ನೌಕಾಪಡೆಗೆ ಸೇರ್ಪಡೆ ಮಾಡಲಾಯಿತು.

ನೌಕಾಪಡೆಯ ಈಸ್ಟರ್ನ್ ಕಮಾಂಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಈ ಅತ್ಯಾಧುನಿಕ ಯುದ್ಧನೌಕೆಗಳನ್ನು ನೌಕಾಪಡೆಗೆ ಸೇರ್ಪಡೆ ಮಾಡಿದರು.

ವಿನ್ಯಾಸ ಹಾಗೂ ಶಸ್ತ್ರಾಸ್ತ್ರಗಳ ಬಳಕೆ ಸಾಮರ್ಥ್ಯದ ದೃಷ್ಟಿಯಿಂದ ಈ ಯುದ್ಧನೌಕೆಗಳಲ್ಲಿ ಮಹತ್ವದ ಸುಧಾರಣೆ ತರಲಾಗಿದ್ದು, ಕಡಲಗಡಿ ಭದ್ರತೆಯಲ್ಲಿ ಇವುಗಳು ಮಹತ್ತರ ಪಾತ್ರವಹಿಸಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ADVERTISEMENT

‘ಪ್ರಾಜೆಕ್ಟ್‌ 17ಎ’ ಶ್ರೇಣಿಯ ಎರಡನೇ ಯುದ್ಧನೌಕೆಯಾದ ‘ಉದಯಗಿರಿ’ಯನ್ನು ಮಜಗಾಂವ ಡಾಕ್‌ ಶಿಪ್‌ಬಿಲ್ಡರ್ಸ್ ಲಿಮಿಟೆಡ್(ಎಂಡಿಎಲ್‌) ನಿರ್ಮಿಸಿದ್ದರೆ, ಮತ್ತೊಂದು ಯುದ್ಧನೌಕೆ ‘ಹಿಮಗಿರಿ’ಯನ್ನು ಕೋಲ್ಕತ್ತ ಮೂಲದ ಗಾರ್ಡನ್‌ ರೀಚ್ ಶಿಪ್‌ಬಿಲ್ಡರ್ಸ್ ಅಂಡ್ ಎಂಜಿನಿಯರ್ಸ್‌(ಜಿಆರ್‌ಎಸ್‌ಇ) ಕಂಪನಿಯು ನಿರ್ಮಿಸಿದೆ.

ವೈಶಿಷ್ಟ್ಯಗಳು

  • ‘ಉದಯಗಿರಿ’ಯು ನೌಕಾಪಡೆಯ ‘ವಾರ್‌ಶಿಪ್‌ ಡಿಸೈನ್ ಬ್ಯುರೊ’ ವಿನ್ಯಾಸ ಮಾಡಿರುವ 100ನೇ ಯುದ್ಧನೌಕೆಯಾಗಿದೆ

  • ಈ ಮೊದಲಿನ ಯುದ್ಧನೌಕೆಗಳಿಗಿಂತ (ಶಿವಾಲಿಕ್ ಶ್ರೇಣಿಯ ಯುದ್ಧನೌಕೆಗಳು) ಈ ನೂತನ ಯುದ್ಧನೌಕೆಗಳು ಶೇ 5ರಷ್ಟು ದೊಡ್ಡದಾಗಿವೆ

  • ನೆಲದಿಂದ ನೆಲಕ್ಕೆ ನೆಲದಿಂದ ಆಗಸಕ್ಕೆ ಚಿಮ್ಮುವ ಸೂಪರ್‌ಸಾನಿಕ್ ಕ್ಷಿಪಣಿಗಳು ಜಲಾಂತರ್ಗಾಮಿ ನಿರೋಧಕ ವ್ಯವಸ್ಥೆಗಳನ್ನು ಈ ಯುದ್ಧನೌಕೆಗಳಲ್ಲಿ ಅಳವಡಿಸಬಹುದು

  • ದೇಶೀಯವಾಗಿಯೇ ತಯಾರಿಸಲಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹಾಗೂ ಸೆನ್ಸರ್‌ಗಳನ್ನು ಈ ಯುದ್ಧನೌಕೆಗಳಲ್ಲಿ ಅಳವಡಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.