ADVERTISEMENT

ನಿಗದಿತ ಅವಧಿಯೊಳಗೇ ರಫೇಲ್‌ ಜೆಟ್‌ಗಳ ಪೂರೈಸಲಿದೆ ಫ್ರಾನ್ಸ್: ರಾಜನಾಥ್ ಸಿಂಗ್

ಏಜೆನ್ಸೀಸ್
Published 2 ಜೂನ್ 2020, 10:04 IST
Last Updated 2 ಜೂನ್ 2020, 10:04 IST
ರಫೇಲ್ ಯುದ್ಧವಿಮಾನ –ಸಂಗ್ರಹ ಚಿತ್ರ
ರಫೇಲ್ ಯುದ್ಧವಿಮಾನ –ಸಂಗ್ರಹ ಚಿತ್ರ   

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕದ ಸವಾಲುಗಳ ಹೊರತಾಗಿಯೂ ನಿಗದಿತ ಅವಧಿಯೊಳಗೆ ರಫೇಲ್ ಯುದ್ಧವಿಮಾನಗಳನ್ನು ಪೂರೈಸುವ ಒಪ್ಪಂದಕ್ಕೆ ಬದ್ಧವಾಗಿರುವುದಾಗಿ ಫ್ರಾನ್ಸ್ ಹೇಳಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಫ್ರಾನ್ಸ್ ಸಶಸ್ತ್ರ ಪಡೆಗಳ ಸಚಿವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಕೊರೊನಾ ಪರಿಸ್ಥಿತಿ ಮತ್ತು ಪ್ರಾದೇಶಿಕ ಸಹಕಾರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.

‘ಫ್ರಾನ್ಸ್ ಸಚಿವೆ ಫ್ಲಾರೆನ್ಸ್ ಪಾರ್ಲಿ ಜೊತೆ ಇಂದು ದೂರವಾಣಿ ಮೂಲಕ ಮಾತುಕತೆ ನಡೆಸಿದೆ. ಕೊರೊನಾ ಪರಿಸ್ಥಿತಿ, ಪ್ರಾದೇಶಿಕ ಭದ್ರತೆ, ಭಾರತ-ಫ್ರಾನ್ಸ್ ನಡುವಣ ದ್ವಿಪಕ್ಷೀಯ ಸಹಕಾರ ವೃದ್ಧಿಸುವ ಬಗ್ಗೆ ಮಾತುಕತೆ ನಡೆಸಿದ್ದೇವೆ’ ಎಂದು ರಾಜನಾಥಸಿಂಗ್ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಫ್ರಾನ್ಸ್ ಸಶಸ್ತ್ರ ಪಡೆಗಳ ಶ್ರಮದ ಬಗ್ಗೆ ಇಬ್ಬರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದೇವೆ. ಇದೇ ವೇಳೆ, ಕೊರೊನಾ ಸವಾಲುಗಳ ಹೊರತಾಗಿಯೂ ನಿಗದಿತ ಅವಧಿಯೊಳಗೆ ರಫೇಲ್ ಯುದ್ಧವಿಮಾನಗಳನ್ನು ಪೂರೈಸುವುದಾಗಿ ಪಾರ್ಲಿ ತಿಳಿಸಿದ್ದಾರೆ’ ಎಂದು ಸಿಂಗ್ ಉಲ್ಲೇಖಿಸಿದ್ದಾರೆ.

ಒಪ್ಪಂದದ ಪ್ರಕಾರ ನಾಲ್ಕು ರಫೇಲ್ ಯುದ್ಧ ವಿಮಾನಗಳು ಜುಲೈ ಅಂತ್ಯದ ವೇಳೆಗೆ ಭಾರತಕ್ಕೆ ಬರಬೇಕಿವೆ. ಮೇ ಅಂತ್ಯದೊಳಗೆ ಫ್ರಾನ್ಸ್‌ ಯುದ್ಧವಿಮಾನಗಳನ್ನು ಭಾರತಕ್ಕೆ ಕಳುಹಿಸಿಕೊಡಬೇಕೆಂದು ಈ ಹಿಂದೆ ನಿಗದಿಪಡಿಸಲಾಗಿತ್ತು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ಸಮ್ಮತಿಯೊಂದಿಗೆ ಎರಡು ತಿಂಗಳ ಮಟ್ಟಿಗೆ ಮುಂದೂಡಲಾಗಿತ್ತು.

ಸುಮಾರು ₹58,000 ಕೋಟಿ ವೆಚ್ಚದಲ್ಲಿ 36 ರಫೇಲ್ ಯುದ್ಧವಿಮಾನ ಖರೀದಿಸಲು ಭಾರತ 2016ರ ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದಂತೆ ಭಾರತಕ್ಕೆ ನಿಗದಿತ ಅವಧಿಯೊಳಗೇ ರಫೇಲ್‌‌ ಜೆಟ್‌ಗಳನ್ನು ಪೂರೈಸಲಾಗುವುದು ಎಂದು ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿರುವ ಫ್ರೆಂಚ್ ರಾಯಭಾರಿ ಇಮ್ಯಾನ್ಯುಯಲ್‌ ಲೆನೈನ್ ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.