ADVERTISEMENT

ಸೆ.10ಕ್ಕೆ ರಫೇಲ್ ನಿಯೋಜನೆ ಸಮಾರಂಭ: ಫ್ರೆಂಚ್‌ ರಕ್ಷಣಾ ಸಚಿವರ ಉಪಸ್ಥಿತಿ ಸಾಧ್ಯತೆ

ಏಜೆನ್ಸೀಸ್
Published 28 ಆಗಸ್ಟ್ 2020, 11:12 IST
Last Updated 28 ಆಗಸ್ಟ್ 2020, 11:12 IST
ಅಂಬಾಲ ವಾಯುನೆಲೆಯಲ್ಲಿ ರಫೇಲ್ ಯುದ್ಧವಿಮಾನ
ಅಂಬಾಲ ವಾಯುನೆಲೆಯಲ್ಲಿ ರಫೇಲ್ ಯುದ್ಧವಿಮಾನ   

ನವದೆಹಲಿ: ರಫೇಲ್ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಸೆ.10ರಂದು ಅಂಬಾಲಾದ ವಾಯುನೆಲೆಯಲ್ಲಿ ಔಪಚಾರಿಕವಾಗಿ ನಿಯೋಜಿಸಲಿದ್ದಾರೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಫ್ರಾನ್ಸ್‌ ರಕ್ಷಣಾ ಸಚಿವ ಫ್ಲೊರೆನ್ಸ್ ಪಾರ್ಲೆ ಅವರನ್ನು ಆಮಂತ್ರಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಸೆ.4ರಿಂದ 6ರವರೆಗೆ ರಷ್ಯಾದಲ್ಲಿ ಶಾಂಘೈ ಕೊಆಪರೇಷನ್ ಆರ್ಗನೈಸೇಷನ್ ದೇಶಗಳ ರಕ್ಷಣಾ ಸಚಿವರೊಂದಿಗೆ ರಾಜ್‌ನಾಥ್‌ ಸಿಂಗ್ ಸಭೆ ನಡೆಸಲಿದ್ದಾರೆ. ಅವರು ಹಿಂದಿರುಗಿದ ನಂತರ ಅಂಬಾಲಾ ವಾಯುನೆಲೆಯಲ್ಲಿ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

'ಫ್ರಾನ್ಸ್ ರಕ್ಷಣಾ ಸಚಿವರನ್ನು ಸಮಾರಂಭಕ್ಕೆ ಆಹ್ವಾನಿಸುವ ಮೂಲಕ ಭಾರತ-ಫ್ರಾನ್ಸ್‌ ದೇಶಗಳ ರಾಜತಾಂತ್ರಿಕ ಸಂಬಂಧ ವೃದ್ಧಿಗೆ ಭಾರತ ಪ್ರಯತ್ನಿಸುತ್ತಿದೆ' ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಫ್ರಾನ್ಸ್‌ನಿಂದ ಜುಲೈ 29ರಂದು ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿದ್ದವು. ಈ ಪೈಕಿ ಮೂರು ಸಿಂಗಲ್ ಸೀಟರ್ ಮತ್ತು ಎರಡು ಟ್ವಿನ್ ಸೀಟರ್‌ಗಳು ಇವೆ.

ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಶನ್‌ನಿಂದ ಒಟ್ಟು 36 ರಫೇಲ್ ಯುದ್ಧವಿಮಾನಗಳನ್ನು₹ 60,000 ಕೋಟಿ ವೆಚ್ಚದಲ್ಲಿ ಖರೀದಿಸಲು ಭಾರತ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.

ಯುದ್ಧವಿಮಾನ ಖರೀದಿಗೆ ಫ್ರಾನ್ಸ್–ಭಾರತದ ನಡುವೆ ಒಪ್ಪಂದ ಏರ್ಪಟ್ಟ ನಾಲ್ಕು ವರ್ಷಗಳ ಬಳಿಕ ಮೊದಲ ಹಂತವಾಗಿ ಐದು ಯುದ್ಧ ವಿಮಾನಗಳು ಭಾರತಕ್ಕೆ ಬಂದಿವೆ. ಇನ್ನೂ ಐದು ವಿಮಾನಗಳನ್ನು ಫ್ರಾನ್ಸ್‌ನಲ್ಲಿ ತರಬೇತಿಗೆ ಬಳಸಿಕೊಳ್ಳಲಾಗುತ್ತಿದೆ.

ಚೀನಾ ಗಡಿಯ ಲಡಾಖ್ ವಲಯದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ರಫೇಲ್ ವಿಮಾನವನ್ನು ನಿಯೋಜಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಒಟ್ಟು 36 ರಫೇಲ್‌ ವಿಮಾನಗಳ ಪೈಕಿ 30 ವಿಮಾನಗಳು ಯುದ್ಧ ಸನ್ನದ್ಧ ಸ್ಥಿತಿಯಲ್ಲಿರಲಿವೆ ಹಾಗೂ ಉಳಿದ 6 ವಿಮಾನಗಳು ತರಬೇತಿ ನೀಡಲಿವೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್

2016ರಲ್ಲಿ ಒಪ್ಪಂದ: ಎನ್‌ಡಿಎ ಸರ್ಕಾರವು ಫ್ರಾನ್ಸ್‌ನ ವಾಯುಯಾನ ಸಂಸ್ಥೆ ಡಾಸೊ ಏವಿಯೇಷನ್‌ನಿಂದ 36 ರಫೇಲ್ ಯುದ್ಧವಿಮಾನಗಳನ್ನು ₹59,000 ಕೋಟಿಗೆ ಖರೀದಿಸುವ ಒಪ್ಪಂದಕ್ಕೆ 2016ರ‌ ಸೆಪ್ಟೆಂಬರ್ 23ರಂದು ಸಹಿ ಹಾಕಿತ್ತು.

‘10 ರಫೇಲ್ ಜೆಟ್‌ಗಳನ್ನು ಭಾರತಕ್ಕೆ ಕಳಿಸುವ ಕಾರ್ಯ ಪೂರ್ಣಗೊಂಡಿದೆ. ಆದರೆ, ಐದು ವಿಮಾನಗಳು ಬಂದಿದ್ದು, ಉಳಿದ ಐದು ವಿಮಾನಗಳನ್ನು ತರಬೇತಿ ಉದ್ದೇಶಕ್ಕಾಗಿ ಫ್ರಾನ್ಸ್‌ನಲ್ಲಿಯೇ ಬಿಡಲಾಗಿದೆ’ ಎಂದು ಕೇಂದ್ರಸರ್ಕಾರ ಹೇಳಿತ್ತು.

‘2021ರ‌ ಅಂತ್ಯದ ವೇಳೆಗೆ, ಎಲ್ಲ‌ 36 ಯುದ್ಧವಿಮಾನಗಳು ವಾಯುಪಡೆಯನ್ನು ಸೇರಲಿವೆ’ ಎಂದೂ ಸರ್ಕಾರಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.