ADVERTISEMENT

ರಾಷ್ಟ್ರಪತಿ ಹುದ್ದೆಗೆ ಆಸೆಪಟ್ಟಿಲ್ಲ, ಭಿನ್ನಮತ ಮಾಡಿಲ್ಲ: ಎಂ. ವೆಂಕಯ್ಯ ನಾಯ್ಡು

ಪಿಟಿಐ
Published 9 ಆಗಸ್ಟ್ 2022, 4:42 IST
Last Updated 9 ಆಗಸ್ಟ್ 2022, 4:42 IST
ಎಂ. ವೆಂಕಯ್ಯ ನಾಯ್ಡು
ಎಂ. ವೆಂಕಯ್ಯ ನಾಯ್ಡು   

ನವದೆಹಲಿ: ಸಭಾಪತಿಯಾಗಿ ಸದನವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ ಹಾಗೂ ಸ್ಥಳೀಯ ಭಾಷೆಗಳಲ್ಲಿ ಮಾತನಾಡಲು ಪ್ರೋತ್ಸಾಹ ನೀಡಿದ್ದಾರೆ ಎಂದು ಎಂ. ವೆಂಕಯ್ಯ ನಾಯ್ಡು ಅವರನ್ನು ರಾಜ್ಯಸಭಾ ಸದಸ್ಯರು ಪಕ್ಷಭೇದ ಮರೆತು ಪ್ರಶಂಸಿಸಿದರು.

ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10ರಂದು ಮುಕ್ತಾಯವಾಗಲಿದ್ದು,ರಾಜ್ಯಸಭೆಯಲ್ಲಿ ಸೋಮವಾರ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.

ತಮ್ಮ ಅನುಭವಗಳನ್ನು ಆತ್ಮಚರಿತ್ರೆ ರೂಪದಲ್ಲಿ ಹೊರತರುವಂತೆ ಹಲವು ಸಂಸದರು ನಾಯ್ಡು ಅವರನ್ನು ಆಗ್ರಹಿಸಿದರು. ಒತ್ತಡದ ನಡುವೆಯೂ ನಾಯ್ಡು ಅವರು ಸದನವನ್ನು ತೂಗಿಸಿಕೊಂಡು ಹೋದ ವೈಖರಿಯನ್ನು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶ್ಲಾಘಿಸಿದರು. ‘ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಮ್ಮತ ಮೂಡಿಸಲು ನಾಯ್ಡು ಮುಂದಾಗಿದ್ದರು. ಅವರು ಉಳಿಸಿಹೋದ ಕೆಲಸವನ್ನು ಸರ್ಕಾರ ಪೂರ್ಣಗೊಳಿಸಲಿ’ ಎಂದು ಖರ್ಗೆ ಆಶಿಸಿದರು.

ADVERTISEMENT

ನಾಯ್ಡು ಅವರು ಸದನದ ಉತ್ಪಾದಕತೆಯನ್ನು ಹೆಚ್ಚಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ‘ಸರ್ಕಾರವು ಪ್ರಸ್ತಾವಗಳನ್ನು ಇರಿಸಲು, ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಲು ಹಾಗೂ ಸದನದಲ್ಲಿ ಚರ್ಚೆಗಳು ನಡೆಯಲು ಅವಕಾಶ ನೀಡುವ ಮೂಲಕ ನಾಯ್ಡು ಅವರು ಸದನದ ತತ್ವಗಳನ್ನು ಪಾಲಿಸಿದ್ದಾರೆ’ ಎಂದು ಪ್ರಧಾನಿ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್‌ ಸದಸ್ಯ ಡೆರೆಕ್ ಒಬ್ರಿಯಾನ್ ಅವರು ನಾಯ್ಡು ಅವರ ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿಕೊಂಡಾಗ, ಸಭಾಪತಿ ಭಾವುಕರಾದರು.

***

ರಾಷ್ಟ್ರಪತಿ ಹುದ್ದೆಗೆ ಎಂದೂ ಆಸೆಪಟ್ಟಿಲ್ಲ. ಭಿನ್ನಮತೀಯನಾಗಿ ಎಂದಿಗೂ ಗುರುತಿಸಿಕೊಂಡಿಲ್ಲ. ಭಾರವಾದ ಹೃದಯದಿಂದಲೇ ಬಿಜೆಪಿ ಬಿಟ್ಟಿದ್ದೆ.
–ಎಂ. ವೆಂಕಯ್ಯ ನಾಯ್ಡು, ಸಭಾಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.