ADVERTISEMENT

ರಾಜ್ಯಸಭೆ ಚುನಾವಣೆ: ಬಿಜೆಪಿಗೆ 20, ಕಾಂಗ್ರೆಸ್‌ಗೆ 11 ಸ್ಥಾನ ನಿರೀಕ್ಷೆ

ರಾಜ್ಯಸಭೆಗೆ ನಿರ್ಮಲಾ, ನಕ್ವಿ, ಜೈರಾಂ, ಚಿದಂಬರಂ ಪುನರಾಯ್ಕೆ ಸಾಧ್ಯತೆ

ಶೆಮಿಜ್‌ ಜಾಯ್‌
Published 27 ಮೇ 2022, 19:28 IST
Last Updated 27 ಮೇ 2022, 19:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಜ್ಯಸಭೆಯ55 ಸ್ಥಾನಗಳಿಗೆಜೂನ್‌ 10ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯ 20 ಮತ್ತು ಕಾಂಗ್ರೆಸ್‌ನ 11 ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇದೆ.

15 ರಾಜ್ಯಗಳ ವಿಧಾನಸಭೆಗಳಲ್ಲಿ ರಾಜಕೀಯ ಪಕ್ಷಗಳ ಬಲಗಳನ್ನು ಆಧರಿಸಿ ಈ ಲೆಕ್ಕ ಹಾಕಲಾಗಿದೆ. ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ ಒಂದೇ ರಾಜ್ಯದಲ್ಲೇಎಂಟು ಸ್ಥಾನಗಳನ್ನು ಬಿಜೆಪಿ ಗೆಲ್ಲುವ ನಿರೀಕ್ಷೆ ಇದೆ. ಸದ್ಯ ಉತ್ತರ ಪ್ರದೇಶದಿಂದ ಆಯ್ಕೆಯಾಗಿರುವ ಬಿಜೆಪಿಯ ನಾಲ್ವರು ಸದಸ್ಯರು ನಿವೃತ್ತಿ ಹೊಂದಲಿದ್ದಾರೆ. ಆಂಧ್ರ ಪ್ರದೇಶ, ಛತ್ತೀಸಗಡ, ರಾಜಸ್ಥಾನ ಮತ್ತು ಜಾರ್ಖಂಡ್‌ನಲ್ಲಿಬಿಜೆಪಿಯು ಕೆಲ ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಆದರೆ ಈ ನಷ್ಟವನ್ನು ಉತ್ತರ ಪ್ರದೇಶದ ಗೆಲುವು ಸರಿದೂಗಿಸಲಿದೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದ ನಿರ್ಮಲಾ ಸೀತಾರಾಮನ್‌ ಮತ್ತು ಜಾರ್ಖಂಡ್‌ನಿಂದ ಆಯ್ಕೆ ಆಗಿದ್ದ ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರ ರಾಜ್ಯಸಭಾ ಅವಧಿ ಮುಕ್ತಾಯವಾಗಲಿದೆ. ಅವರಿಬ್ಬರೂ ಬಿಜೆಪಿಯಿಂದ ಮರು ಆಯ್ಕೆ ಆಗಲಿದ್ದಾರೆ.

ADVERTISEMENT

ಕಾಂಗ್ರೆಸ್‌ನ ಒಟ್ಟು ಎಂಟು ರಾಜ್ಯಸಭಾ ಸದಸ್ಯರ ಅವಧಿ ಕೊನೆಯಾಗಲಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ 11 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ರಾಜಸ್ಥಾನದ ನಾಲ್ಕು ಸ್ಥಾನಗಳಲ್ಲಿ ಮೂರನ್ನು ಕಾಂಗ್ರೆಸ್‌ ಗೆಲ್ಲಲಿದೆ ಎನ್ನಲಾಗಿದೆ.

ಕಾಂಗ್ರೆಸ್‌ನ ಬಂಡಾಯ ಗುಂಪು ‘ಜಿ–23’ರ ನಾಯಕರಲ್ಲಿ ಪ್ರಮುಖರಾದ ಗುಲಾಂ ನಬಿ ಆಜಾದ್‌ ಮತ್ತು ಆನಂದ್ ಶರ್ಮ ಅವರೂ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.ಆಜಾದ್‌ ಮತ್ತು ಶರ್ಮ ಅವರು ಕಣಕ್ಕಿಳಿಯುವ ಕುರಿತು ಕಾಂಗ್ರೆಸ್‌ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಆಜಾದ್‌ ಅವರು ಮಹಾರಾಷ್ಟ್ರ ಅಥವಾ ರಾಜಸ್ಥಾನದಿಂದ ಮತ್ತು ಶರ್ಮ ಅವರನ್ನು ಹರಿಯಾಣದಿಂದ ಕಣಕ್ಕೆ ಇಳಿಸುವಂತೆ ಹಿರಿಯ ಮುಖಂಡ ಭೂಪಿಂದರ್‌ ಹೂಡಾ ಅವರು ಒತ್ತಡ ಹೇರುತ್ತಿದ್ದಾರೆ.

ಮಹಾರಾಷ್ಟ್ರದಿಂದ ಆಯ್ಕೆ ಆಗಿದ್ದ ಹಿರಿಯ ಮುಖಂಡ ಪಿ.ಚಿದಂಬರಂ ಅವರು ಈ ಬಾರಿ ತಮಿಳುನಾಡಿನಿಂದ ಸ್ಪರ್ಧಿಸಿ ಆಯ್ಕೆ ಅಗುವ ಸಾಧ್ಯತೆ ಇದೆ. ಮತ್ತೊಬ್ಬ ಹಿರಿಯ ನಾಯಕ ಜೈರಾಮ್‌ ರಮೇಶ್‌ ಅವರು ಕರ್ನಾಟಕದಿಂದ ಪುನರ್‌ಆಯ್ಕೆ ಆಗುವ ನಿರೀಕ್ಷೆ ಇದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಆಪ್ತ ವಲಯದಲ್ಲಿರುವ ಅಜಯ್‌ ಮಾಕನ್, ರಣದೀಪ್‌ ಸುರ್ಜೇವಾಲಾ ಅವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಮುಕುಲ್‌ ವಾಸ್ನಿಕ್‌ ಮತ್ತು ರಾಜೀವ್‌ ಶುಕ್ಲಾ ಕೂಡಾ ಟಿಕೆಟ್‌ ಆಕಾಂಕ್ಷೆ ಹೊಂದಿದ್ದಾರೆ.

ಉತ್ತರ ಪ್ರದೇಶ ಕಾಂಗ್ರೆಸ್‌ನ ಏಕೈಕ ರಾಜ್ಯಸಭಾ ಸಂಸದ ಕಪಿಲ್‌ ಸಿಬಲ್‌ ಅವರು ಕಾಂಗ್ರೆಸ್‌ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿ ಆಗಿ ರಾಜ್ಯಸಭೆ ಚುನಾವಣೆಯಲ್ಲಿಸ್ಪರ್ಧಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.