ಎಂಎನ್ಎಂ ಪಕ್ಷದ ಮುಖ್ಯಸ್ಥ ಹಾಗೂ ನಟ ಕಮಲ್ ಹಾಸನ್ ಅವರು ರಾಜ್ಯಸಭೆ ಚುನಾವಣೆಗಾಗಿ ಚೆನ್ನೈನಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಹಾಗೂ ಪಕ್ಷದ ಮುಖಂಡರು ಇದ್ದರು
–ಪಿಟಿಐ ಚಿತ್ರ
ಚೆನ್ನೈ: ರಾಜ್ಯಸಭೆಯ ಆರು ಸ್ಥಾನಗಳಿಗೆ ಜೂನ್ 19ರಂದು ನಡೆಯಲಿರುವ ಚುನಾವಣೆಗಾಗಿ ಆಡಳಿತಾರೂಢ ಡಿಎಂಕೆಯ ಮೂವರು, ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆಯ ಇಬ್ಬರು ಅಭ್ಯರ್ಥಿಗಳು ಹಾಗೂ ಎಂಎನ್ಎಂ ಮುಖ್ಯಸ್ಥರೂ ಆದ ನಟ ಕಮಲ್ ಹಾಸನ್ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಡಿಎಂಕೆ ಅಭ್ಯರ್ಥಿಗಳಾದ ಎಸ್.ಆರ್.ಶಿವಲಿಂಗಮ್, ಪಿ.ವಿಲ್ಸನ್, ಲೇಖಕಿ ರುಕಯ್ಯ ಮಲಿಕ್ ಅವರು ವಿಧಾನಸಭೆಯ ಹೆಚ್ಚುವರಿ ಕಾರ್ಯದರ್ಶಿ ಬಿ.ಸುಬ್ರಮಣಿಯಂ ಅವರಿಗೆ ನಾಮಪತ್ರ ಸಲ್ಲಿಸಿದರು.
ಡಿಎಂಕೆ ಪಕ್ಷ ಕಮಲ್ ಹಾಸನ್ ಅವರನ್ನು ಬೆಂಬಲಿಸಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಮ್ಮುಖದಲ್ಲಿ, ಕಮಲ್ ಹಾಸನ್ ಅವರು ಕೂಡ ಬಿ.ಸುಬ್ರಮಣಿಯಂ ಅವರಿಗೆ ನಾಮಪತ್ರ ಸಲ್ಲಿಸಿದರು.
ಎಐಎಡಿಎಂಕೆಯ ಐ.ಎಸ್.ಇನ್ಬದೊರೈ ಹಾಗೂ ಎಂ.ಧನಪಾಲ್ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಇ.ಕೆ.ಪಳನಿಸ್ವಾಮಿ ನೇತೃತ್ವದಲ್ಲಿ ಬಂದು ನಾಮಪತ್ರ ಸಲ್ಲಿಸಿದರು.
ಆರು ಹಾಲಿ ಸಂಸದರ ಅವಧಿ ಜುಲೈ 24ಕ್ಕೆ ಮುಕ್ತಾಯಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.