ADVERTISEMENT

ದೇಶದಾದ್ಯಂತ ಸಂಭ್ರಮದ ರಕ್ಷಾ ಬಂಧನ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2020, 5:34 IST
Last Updated 3 ಆಗಸ್ಟ್ 2020, 5:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಜನರು ಅಣ್ಣ-ತಂಗಿಯರ ಪವಿತ್ರ ಹಬ್ಬವಾದ ರಕ್ಷಾ ಬಂಧನದ ಸಂಭ್ರಮದಲ್ಲಿದ್ದಾರೆ. ಆಗಸ್ಟ್​ 3ರಂದು ಈ ಬಾರಿ ದೇಶದಲ್ಲಿ ರಾಖಿ ಹಬ್ಬ ಆಚರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರು ರಕ್ಷಾ ಬಂಧನಕ್ಕೆ ಶುಭಾಶಯ ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಾ ಬಂಧನದ ಪವಿತ್ರ ಹಬ್ಬದಂದು ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು ಎಂದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೋವಿಡ್-19 ದೃಢಪಟ್ಟಿದ್ದು, ಆಸ್ಪತ್ರೆ ಸೇರಿದ್ದಾರೆ. ಹೀಗಿದ್ದರೂ ರಕ್ಷಾ ಬಂಧನಕ್ಕೆ ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. ರಕ್ಷಾಬಂಧನದ ಪವಿತ್ರ ಹಬ್ಬದಂದು ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಕೂಡ ಟ್ವೀಟ್ ಮೂಲಕ ಶುಭಾಶಯ ಕೋರಿದ್ದು, ರಕ್ಷಾ ಬಂಧನಕ್ಕೆ ಶುಭಾಶಯಗಳು! ರಾಖಿ ಎಂಬುದು ಪ್ರೀತಿ ಮತ್ತು ನಂಬಿಕೆಯ ಪವಿತ್ರ ದಾರವಾಗಿದ್ದು, ಸಹೋದರಿಯರನ್ನು ಸಹೋದರರೊಂದಿಗೆ ವಿಶೇಷ ಬಂಧವನ್ನು ಬೆಸೆಯುತ್ತದೆ. ಈ ದಿನ ಮಹಿಳೆಯರ ಗೌರವ ಮತ್ತು ಘನತೆಯನ್ನು ಭದ್ರಪಡಿಸುವ ನಾವು ಬದ್ಧತೆಯನ್ನು ಪುನರುಚ್ಚರಿಸೋಣ ಎಂದಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಟ್ವೀಟ್ ಮಾಡಿ ಶುಭಾಶಯ ಕೋರಿದ್ದು, ಎಲ್ಲರಿಗೂ ರಾಖಿ ಬಂಧನದ ಶುಭಾಶಯಗಳು. ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಲು ನಿರ್ಧರಿಸಿದ ನಂತರ, ಕಬಿಗುರು ರವೀಂದ್ರನಾಥ ಠಾಕೂರ್ ಏಕತೆ ಮತ್ತು ಸಾಮರಸ್ಯದ ಸಂದೇಶವನ್ನು ನೀಡಲು ರಾಖಿ ಬಂಧನ್ ಸಂಪ್ರದಾಯವನ್ನು ಪ್ರಾರಂಭಿಸಿದರು. ಅವರು ‘ಬಾಂಗ್ಲರ್ ಮತಿ, ಬಾಂಗ್ಲರ್ ಜೋಲ್’ ಎಂಬ ಪದ್ಯವನ್ನು ಕೂಡ ಬರೆದಿದ್ದಾರೆ. ಎಲ್ಲರಿಗೂ ನನ್ನ ಶುಭಾಶಯಗಳು ಎಂದು ಬರೆದಿದ್ದಾರೆ.

ನಾಡಿನ ಎಲ್ಲ ಸಹೋದರ ಸಹೋದರಿಯರಿಗೆ ರಕ್ಷಾಬಂಧನದ ಹೃತ್ಪೂರ್ವಕ ಶುಭಾಶಯಗಳು. ಭ್ರಾತೃತ್ವದ ಸಂಬಂಧವನ್ನು ಸಂಭ್ರಮಿಸುವ, ಬಾಂಧವ್ಯವನ್ನು ಗಟ್ಟಿಗೊಳಿಸುವ ರಕ್ಷಾಬಂಧನ ಎಲ್ಲರ ಬಾಳಿನಲ್ಲಿ ಸಂತಸದ ಹೊಂಬೆಳಕನ್ನು ಮೂಡಿಸಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.