ADVERTISEMENT

ರಾಮಲಲ್ಲಾ ಪ್ರತಿಷ್ಠಾಪನೆಯ 2ನೇ ವಾರ್ಷಿಕೋತ್ಸವ: ಧ್ವಜಾರೋಹಣ ನೆರವೇರಿಸಿದ ರಾಜನಾಥ್

ಪಿಟಿಐ
Published 31 ಡಿಸೆಂಬರ್ 2025, 12:30 IST
Last Updated 31 ಡಿಸೆಂಬರ್ 2025, 12:30 IST
   

ಅಯೋಧ್ಯೆ: ಇಲ್ಲಿನ ರಾಮಮಂದಿರದಲ್ಲಿ ಇಂದು (ಬುಧವಾರ) ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯ 2ನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಮ ಮಂದಿರ ಸಂಕೀರ್ಣದಲ್ಲಿರುವ ಅನ್ನಪೂರ್ಣ ದೇವಸ್ಥಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಇವರ ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದ್ದರು.

ಅನ್ನಪೂರ್ಣ ದೇವಸ್ಥಾನವು ರಾಮ ಮಂದಿರ ಸಂಕೀರ್ಣದಲ್ಲಿರುವ ಏಳು ದೇವಾಲಯಗಳಲ್ಲಿ ಒಂದಾಗಿದೆ. ಧ್ವಜಾರೋಹಣದ ಬಳಿಕ ರಾಜನಾಥ್ ಸಿಂಗ್ ಅವರು ರಾಮಲಲ್ಲಾ ವಿಗ್ರಹದ ಮುಂದೆ ಪ್ರಾರ್ಥನೆ ಸಲ್ಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಗ್ರಹ ಪ್ರತಿಷ್ಠಾಪನೆಯ 2ನೇ ವಾರ್ಷಿಕೋತ್ಸವ ಹಿನ್ನೆಲೆ ಬುಧವಾರ ಮತ್ತು ಗುರುವಾರ ಪ್ರಮುಖ ಪೂಜಾ– ಕಾರ್ಯಕ್ರಮಗಳು ನಡೆಯಲಿವೆ, 'ಪ್ರಾಣ ಪ್ರತಿಷ್ಠಾ ದ್ವಾದಶಿ' ಆಚರಣೆಗಳು ಶುಕ್ರವಾರದವರೆಗೆ ಮುಂದುವರಿಯಲಿವೆ ಎಂದು ಅವರು ಹೇಳಿದ್ದಾರೆ.

ADVERTISEMENT

2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಅದಾದ ಬಳಿಕ ಮಂದಿರ ‍ನಿರ್ಮಾಣ ಪೂರ್ಣಗೊಂಡಿದ್ದರ ಸಂಕೇತವಾಗಿ 2025ರ ನವೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ‘ರಾಮ ಧ್ವಜ’ದ ಧ್ವಜಾರೋಹಣ ನೆರವೇರಿಸಿದ್ದರು.

ಶುಭಕೋರಿದ ಪ್ರಧಾನಿ

ಇಂದು, ರಾಮಲಲ್ಲಾ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವವನ್ನು ಅಯೋಧ್ಯೆಯ ಪವಿತ್ರ ಭೂಮಿಯಲ್ಲಿ ಆಚರಿಸಲಾಗುತ್ತಿದೆ. ಈ ವಾರ್ಷಿಕೋತ್ಸವವು ನಮ್ಮ ನಂಬಿಕೆ ಮತ್ತು ಮೌಲ್ಯಗಳ ದೈವಿಕ ಆಚರಣೆಯಾಗಿದೆ. ಈ ಶುಭ ಸಂದರ್ಭದಲ್ಲಿ, ಭಾರತ ಮತ್ತು ವಿದೇಶಗಳಲ್ಲಿರುವ ಎಲ್ಲಾ ರಾಮ ಭಕ್ತರ ಪರವಾಗಿ, ಭಗವಾನ್ ಶ್ರೀ ರಾಮನಿಗೆ ನನ್ನ ಹೃತ್ಪೂರ್ವಕ ನಮನಗಳು ಅರ್ಪಿಸುತ್ತೇನೆ. ಅಲ್ಲದೇ ಈ ವಿಶೇಷ ದಿನದಂದು ಎಲ್ಲಾ ದೇಶವಾಸಿಗಳಿಗೆ ನನ್ನ ಶುಭಾಶಯಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಭಗವಾನ್ ಶ್ರೀ ರಾಮನ ಅಪಾರ ಕೃಪೆ ಮತ್ತು ಆಶೀರ್ವಾದದಿಂದ, ಅಸಂಖ್ಯಾತ ಭಕ್ತರ ಐದು ಶತಮಾನಗಳ ಕನಸು ನನಸಾಗಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

.

ವಿಐಪಿ ಪಾಸ್ ವಿತರಣೆ ಸ್ಥಗಿತ

ಎರಡನೇ ವಾರ್ಷಿಕೋತ್ಸವ ಹಿನ್ನೆಲೆ ರಾಮಲಲ್ಲಾನ ದರ್ಶನಕ್ಕಾಗಿ ಅಂದಾಜು ಐದರಿಂದ ಆರು ಲಕ್ಷ ಭಕ್ತರು ಅಯೋಧ್ಯೆಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಕ್ತರ ದಟ್ಟಣೆ ಹೆಚ್ಚಾಗುವ ನಿರೀಕ್ಷೆ ಹಿನ್ನೆಲೆ, ಗುರುವಾರದವರೆಗೆ(ಜ.1) ವಿಐಪಿ ಪಾಸ್ ವಿತರಣೆಯನ್ನು ನಿಲ್ಲಿಸಲಾಗಿದೆ. ಈ ಅವಧಿಯಲ್ಲಿ, ರಾಮಲಲ್ಲಾನ ದರ್ಶನ ಮತ್ತು ಪೂಜೆಗೆ ಮುಖ್ಯ ದ್ವಾರದ ಮೂಲಕ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಿವಿಐಪಿಗಳ ಭೇಟಿ ಹಿನ್ನೆಲೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಪಟ್ಟಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಾಮ ಮಂದಿರದ ಜೊತೆಗೆ ನಾಗೇಶ್ವರನಾಥ್, ಹನುಮಾನ್ ಗರ್ಹಿ, ಕನಕ ಭವನ, ರಾಮಪಥ ಮತ್ತು ಘಾಟ್‌ಗಳಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಸುಮಾರು 3,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಸಿಪಿ ತ್ರಿಪಾಠಿ ತಿಳಿಸಿದ್ದಾರೆ.

ಹಿಂದೂ ಕ್ಯಾಲೆಂಡರ್ ಪ್ರಕಾರ ಇಂದೇ 2ನೇ ವಾರ್ಷಿಕೋತ್ಸವ

ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವವನ್ನು 2025ರ ಜ.11ರಂದು ಆಚರಿಸಲಾಗಿತ್ತು. ಆದರೆ ಹಿಂದೂ ಕ್ಯಾಲೆಂಡರ್ ಪ್ರಕಾರ ಎರಡನೇ ವಾರ್ಷಿಕೋತ್ಸವವು 2025ರ ಡಿ.31ರಂದು ಬಂದಿದೆ. ಈ ಹಿನ್ನೆಲೆ ಡಿ.27ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.