ADVERTISEMENT

ಸಾಮಾಜಿಕ ಜಾಲತಾಣಗಳಲ್ಲಿ ರಾಮಭಕ್ತಿ...

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 19:15 IST
Last Updated 5 ಆಗಸ್ಟ್ 2020, 19:15 IST
ಅಯೋಧ್ಯೆಯಲ್ಲಿ ರಾಮ ಮತ್ತು ಮೋದಿ
ಅಯೋಧ್ಯೆಯಲ್ಲಿ ರಾಮ ಮತ್ತು ಮೋದಿ   
""

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬುಧವಾರ ಶಂಕುಸ್ಥಾಪನೆ ಜತೆಯಲ್ಲೇ ಟ್ವಿಟರ್‌ನಲ್ಲಿ #JaiShreeRam (8 ಲಕ್ಷಕ್ಕೂ ಹೆಚ್ಚು ಬಾರಿ ಟ್ವೀಟ್‌), #AyodhyaBhoomipoojan ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಿದ್ದವು. ಟ್ವಿಟರ್ ಮಾತ್ರವಲ್ಲದೆ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ರಾಮಭಕ್ತಿ ಮತ್ತು ನರೇಂದ್ರ ಮೋದಿ ಪ್ರಶಂಸೆ ಹರಿದಾಡಿತು.

500 ವರ್ಷಗಳಲ್ಲಿ ಆಗದ ಕೆಲಸವನ್ನು ನರೇಂದ್ರ ಮೋದಿ ಅವರು ಒಂದು ವರ್ಷದಲ್ಲಿ ಮಾಡಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ರಾಮ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ. ಇದನ್ನು ಸಾಧಿಸಲು ನರೇಂದ್ರ ಮೋದಿ ಅವರೇ ಬರಬೇಕಾಯಿತು ಎಂದು ಹಲವರು #JaiShreeRam ಹ್ಯಾಶ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

‘492 ವರ್ಷಗಳ ನಂತರ ಹಿಂದೂಗಳ ಕನಸು ನನಸಾಗಿದೆ. ಇದಕ್ಕಾಗಿ ಪ್ರಾಣತ್ಯಾಗ ಮಾಡಿದ ಎಲ್ಲರನ್ನೂ ಸ್ಮರಿಸೋಣ’ ಎಂದು ಅಭಿಷೇಕ್ ಕೆ.ಭಗತ್ ಎಂಬುವರು ಟ್ವೀಟ್ ಮಾಡಿದ್ದಾರೆ. ‘ರಾಮಂದಿರದ ಸಲುವಾಗಿ ಇಡೀ ವಿಶ್ವ ಸಂತಸ ಪಡುತ್ತಿದೆ. ಈ ಐತಿಹಾಸಿಕ ದಿನಕ್ಕಾಗಿ ಎಲ್ಲರೂ 500 ವರ್ಷದಿಂದ ಕಾದಿದ್ದರು’ ಎಂದು ಶ್ರೇಯಸ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಮಕ್ಕಳು ರಾಮ ಭಕ್ತಿಗೀತೆಗಳನ್ನು ಹಾಡುವ, ರಾಮ–ಲಕ್ಷ್ಮಣ–ಸೀತೆಯ ವೇಷ ಧರಿಸಿ ಭಕ್ತಿಗೀತೆಗಳನ್ನು ಹಾಡುವ, ಯುವಕ–ಯುವತಿಯರು ಕಾವಿವಸ್ತ್ರ ಧರಿಸಿ ರಾಮಜನ್ಮಭೂಮಿಯನ್ನು ಉಳಿಸುತ್ತೇವೆ ಎಂದು ವೀರಾವೇಶದಿಂದ ಹಾಡುವ ವಿಡಿಯೊಗಳು ಟ್ವಿಟರ್‌, ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ವೈರಲ್ ಆಗಿವೆ.

ADVERTISEMENT

#burnol ಎಂಬ ಹ್ಯಾಶ್‌ಟ್ಯಾಗ್‌ ಸಹ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ‘ರಾಮವಿರೋಧಿಗಳು, ಮೋದಿ ವಿರೋಧಿಗಳು ಮತ್ತು ರಾಹುಲ್ ಗಾಂಧಿ ಅನುಯಾಯಿಗಳು ಬರ್ನಾಲ್ ಹಚ್ಚಿಕೊಳ್ಳಲಿ’ ಎಂಬರ್ಥದ ಟ್ವೀಟ್‌ಗಳನ್ನು ಈ ಹ್ಯಾಶ್‌ಟ್ಯಾಗ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಇದರ ಜತೆಯಲ್ಲೇ #BabriZindaHai ಎಂಬ ಹ್ಯಾಶ್‌ಟ್ಯಾಗ್‌ ಸಹ ಟ್ರೆಂಡ್ ಆಗಿದ್ದು, 7 ಲಕ್ಷಕ್ಕೂ ಹೆಚ್ಚು ಬಾರಿ ಈ ಹ್ಯಾಶ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಲಾಗಿದೆ.

ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಪ್ರಕಟವಾಗಿದ್ದ ದಿನಪತ್ರಿಕೆ ಮತ್ತು ವಾರಪತ್ರಿಕೆಗಳ ಚಿತ್ರಗಳನ್ನು ಈ ಹ್ಯಾಶ್‌ಟ್ಯಾಗ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ದಿ ಹಿಂದೂ ಪತ್ರಿಕೆಯ ಮುಖಪುಟ ಮತ್ತು ಇಂಡಿಯಾ ಟುಡೆ ನಿಯತಕಾಲಿಕದ ಮುಖಪುಟವನ್ನು ಹೆಚ್ಚು ಬಾರಿ ಟ್ವೀಟ್ ಮಾಡಲಾಗಿದೆ. ‘ಅಯೋಧ್ಯೆ: ನೇಷನ್ಸ್‌ ಶೇಮ್‌’ ಎಂಬ ತಲೆಬರಹ ಇಂಡಿಯಾ ಟುಡೆ ಮುಖಪುಟದಲ್ಲಿ ಇದೆ. ‘ಅಂದು ನಾಚಿಕೆಗೇಡಿನ ಸಂಗತಿಯಾಗಿದ್ದು, ಇಂದು ದೊಡ್ಡ ಸಾಧನೆ ಹೇಗಾಯಿತು’ ಎಂದು ನೌಟಂಕಿಬಾಜ್‌ ಹೆಸರಿನ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

‘ಬಾಬರಿ ಮಸೀದಿಯನ್ನು ಕೆಡವಿದ ಕರಸೇವಕರು’ ಎಂಬ ತಲೆಬರಹ ಇರುವ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯ ಮುಖಪುಟದ ಚಿತ್ರವನ್ನೂ ಹಲವರು ಹಂಚಿಕೊಂಡಿದ್ದಾರೆ. ಈ ಕೃತ್ಯವನ್ನು ಯಾರೂ ಮರೆಯುವುದಿಲ್ಲ ಎಂಬ ಅರ್ಥದ ಟ್ವೀಟ್‌ಗಳನ್ನು ಹಲವರು ಮಾಡಿದ್ದಾರೆ.

ಲಂಕೇಶ್ ಹೇಳಿಕೆ ವೈರಲ್‌:

ಟ್ವಿಟರ್‌ನಲ್ಲಿ ಜೈಶ್ರೀರಾಮ್‌ ಎಂಬ ಹ್ಯಾಶ್‌ಟ್ಯಾಗ್‌ ಟ್ರೆಂಡ್ ಆದ ಬೆನ್ನಲ್ಲೇ ಕರ್ನಾಟಕದಲ್ಲಿ ಸಾಹಿತಿ ಮತ್ತು ಪತ್ರಕರ್ತ ಪಿ.ಲಂಕೇಶ್‌ ಅವರ ಹೇಳಿಕೆ ಇರುವ ಫೇಸ್‌ಬುಕ್‌ ಸ್ಟೇಟಸ್‌ಗಳು ವೈರಲ್‌ ಆಗಿವೆ. ‘ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ–ಪಿ.ಲಂಕೇಶ್’ ಎಂದು ಹಲವು ಕನ್ನಡಿಗರು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ. ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲೂ ಹಂಚಿಕೊಂಡಿದ್ದಾರೆ.

‘ಸಾವಿರಾರು ಜನರು ಕೋವಿಡ್‌ನಿಂದ ಸಂಕಷ್ಟದಲ್ಲಿರುವಾಗ ಕೋಟ್ಯಂತರ ಹಣ ಸುರಿದು ಮಂದಿರ ನಿರ್ಮಿಸುವುದನ್ನು ಮುಂದೂಡಬಹುದಿತ್ತು. ಬದಲಿಗೆ ಆಸ್ಪತ್ರೆ ಕಟ್ಟಬಹುದಿತ್ತು. ಮಂದಿರ ನಿರ್ಮಾಣಕ್ಕೆ ಇದು ಸರಿಯಾದ ಸಮಯವೇ? ರಾಮ ರಾಮ ಎಲ್ಲಿದ್ದೀಯಾ’ ಎಂದು ಸೌಮ್ಯ ಎನ್ನುವವರು ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿದ್ದಾರೆ. ಇದನ್ನು ಹಲವರು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.