ADVERTISEMENT

ಬಾಳಾಸಾಹೇಬ್ ಠಾಕ್ರೆ ನಿಧನ ವಿಚಾರ: ವಿವಾದದಲ್ಲಿ ರಾಮದಾಸ್‌ ಕದಂ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 16:07 IST
Last Updated 3 ಅಕ್ಟೋಬರ್ 2025, 16:07 IST
<div class="paragraphs"><p>ಉದ್ಧವ್‌ ಠಾಕ್ರೆ ಮತ್ತು ರಾಜ್‌ ಠಾಕ್ರೆ ಅವರು ಬಾಳಾಸಾಹೇಬ್‌ ಠಾಕ್ರೆ ಅವರ ಭಾವಚಿತ್ರದ ಮುಂದೆ ಫೋಟೊಕ್ಕೆ ಪೋಸ್‌ ನೀಡಿದರು –ಪಿಟಿಐ ಚಿತ್ರ</p></div>

ಉದ್ಧವ್‌ ಠಾಕ್ರೆ ಮತ್ತು ರಾಜ್‌ ಠಾಕ್ರೆ ಅವರು ಬಾಳಾಸಾಹೇಬ್‌ ಠಾಕ್ರೆ ಅವರ ಭಾವಚಿತ್ರದ ಮುಂದೆ ಫೋಟೊಕ್ಕೆ ಪೋಸ್‌ ನೀಡಿದರು –ಪಿಟಿಐ ಚಿತ್ರ

   

ಮುಂಬೈ: ಶಿವಸೇನಾ ಸ್ಥಾಪಕ ಬಾಳಾಸಾಹೇಬ್ ಠಾಕ್ರೆ  ಅವರ ನಿಧನವನ್ನು ಅಧಿಕೃತವಾಗಿ ಘೋಷಿಸುವ ಮುನ್ನ, ಎರಡು ದಿನ ಅವರ ಮೃತದೇಹವನ್ನು ‘ಮಾತೋಶ್ರೀ’ ನಿವಾಸದಲ್ಲಿ ಇರಿಸಲಾಗಿತ್ತು ಎಂಬ ಶಿವಸೇನಾ  ಮುಖಂಡ ರಾಮದಾಸ್‌ ಕದಂ ಅವರ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. 

ಗೋರೆಗಾಂವ್‌ನಲ್ಲಿ ನಡೆದ ಶಿವಸೇನಾದ ವಾರ್ಷಿಕ ವಿಜಯದಶಮಿ ರ್‍ಯಾಲಿಯಲ್ಲಿ  ಮಾತನಾಡಿದ ರಾಮದಾಸ್‌ ಕದಂ, ‘ಬಾಳಾಸಾಹೇಬ್ ಸಾವನ್ನು ಘೋಷಿಸದೆ, ಮೃತದೇಹವನ್ನು ಯಾಕೆ ಎರಡು ದಿನ ‘ಮಾತೋಶ್ರೀ’ಯಲ್ಲಿಇಡಲಾಗಿತ್ತು? ಅಲ್ಲಿ ಒಳಗೇನು ನಡೆಯಿತು? ಅವರ ಬೆರಳಚ್ಚು ತೆಗೆದುಕೊಳ್ಳಲಾಯಿತು ಎಂದು ಕೆಲವರು ಹೇಳುತ್ತಿದ್ದಾರೆ, ಇದು ಯಾಕಾಗಿ? ಅವರ ವಿಲ್‌ ಅನ್ನು ಯಾವಾಗ ಸಿದ್ಧಪಡಿಸಲಾಯಿತು? ಅದಕ್ಕೆ ಸಹಿ ಮಾಡಿದವರು ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹೊರಬರಬೇಕಿದೆ. ಅವರಿಗೆ ಚಿಕಿತ್ಸೆ ನೀಡಿದ ವೈದ್ಯರೇ ನನಗೆ ಈ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕು’  ಎಂದು ಒತ್ತಾಯಿಸಿದರು. 

ADVERTISEMENT

ರಾಮದಾಸ್‌ ಮಾತನಾಡುವಾಗ ಏಕನಾಥ ಶಿಂದೆ ಕೂಡ ವೇದಿಕೆಯಲ್ಲಿದ್ದರು. ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಬಣವು (ಯುಬಿಟಿ) ಕದಂ ಹೇಳಿಕೆಯನ್ನು ಖಂಡಿಸಿದ್ದು, ‘ರಾಮದಾಸ್‌ ತಮ್ಮ ರಾಜಕೀಯ ಜೀವನದಲ್ಲಿ ಈಗಿನ ಎತ್ತರಕ್ಕೆ ಬೆಳೆದಿರುವುದಕ್ಕೆ ಅವರು ಬಾಳಾಸಾಹೇಬ್ ಅವರಿಗೆ ಕೃತಜ್ಞರಾಗಿರಬೇಕು’ ಎಂದು ಹೇಳಿದೆ. 

‘ಉದ್ಧವ್‌ ಠಾಕ್ರೆ ತಮ್ಮ ತಂದೆಯ ಮೃತದೇಹಕ್ಕೆ ಚಿತ್ರಹಿಂಸೆ ನೀಡಿದ್ದಾರೆ’ ಎಂದು ರಾಮದಾಸ್‌  ಶುಕ್ರವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

‘ರಾಮದಾಸ್‌ ಕದಂ ಅಪ್ರಾಮಾಣಿಕ ಮತ್ತು ದ್ರೋಹಿ. ಅವರಿಗೇನು ಗೊತ್ತು, ಬಾಳಾಸಾಹೇಬ್ ಕೊನೆಯ ದಿನಗಳಲ್ಲಿ ನಾನೂ ‘ಮಾತೋಶ್ರೀ’ಯಲ್ಲೇ ಇದ್ದೆ’ ಎಂದು  ‘ಯುಬಿಟಿ’ ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್‌ ಹೇಳಿದ್ದಾರೆ.  

ಬಾಳಾಸಾಹೇಬ್ ಠಾಕ್ರೆ  ಅವರು 2012ರ ನವೆಂಬರ್‌ 17ರಂದು ತಮ್ಮ 86ನೇ ವಯಸ್ಸಿನಲ್ಲಿ ಮೃತಪಟ್ಟಿದ್ದರು. 1966ರ ಜೂನ್‌ 19ರಂದು ಅವರು ಶಿವಸೇನಾ ಸ್ಥಾಪಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.