ತಹವ್ವುರ್ ರಾಣಾ
– ಪಿಟಿಐ ಚಿತ್ರಗಳು
ನವದೆಹಲಿ: 26/11ರ ಮುಂಬೈ ದಾಳಿಯ ರೂವಾರಿ ತಹವ್ವುರ್ ರಾಣಾ ಭಾರತಕ್ಕೆ ಆಗಮಿಸುತ್ತಿರುವ ಬೆನ್ನಲ್ಲೇ ಆತನ ವಿಚಾರಣಾ ಕಡತಗಳನ್ನು ದೆಹಲಿ ಕೋರ್ಟ್ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಭಾರತಕ್ಕೆ ಗಡೀಪಾರು ರದ್ದು ಕೋರಿ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ, ಆತನನ್ನು ಅಮೆರಿಕದಿಂದ ಭಾರತಕ್ಕೆ ವಿಶೇಷ ವಿಮಾನ ಮೂಲಕ ಕರೆತರಲಾಗುತ್ತಿದೆ.
ಜಿಲ್ಲಾ ನ್ಯಾಯಾಧೀಶ ವಿಮಲ್ ಕುಮಾರ್ ಯಾದವ್ ಕಡತಗಳನ್ನು ಪಡೆದುಕೊಂಡಿದ್ದಾರೆ. ಪ್ರಕರಣದ ಕಡತಗಳನ್ನು ಒದಗಿಸುವಂತೆ ಮುಂಬೈ ನ್ಯಾಯಾಲಯಕ್ಕೆ ಜನವರಿ 26ರಂದು ಅವರು ನಿರ್ದೇಶಿಸಿದ್ದರು.
ಮುಂಬೈನಿಂದ ಕಡತಗಳನ್ನು ಒದಗಿಸುವಂತೆ ಕೋರಿ ದೆಹಲಿಯ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ನ್ಯಾಯಾಲಯ ಈ ಬಗ್ಗೆ ತೀರ್ಪು ನೀಡಿತ್ತು.
ಘಟನೆ ಸಂಬಂಧ ಉಭಯ ನಗರಗಳಲ್ಲೂ ವಿವಿಧ ಪ್ರಕರಣಗಳು ಇದ್ದು, ಈ ಹಿಂದೆ ಕಡತಗಳನ್ನು ಮುಂಬೈಗೆ ಕಳುಹಿಸಲಾಗಿತ್ತು.
ಪಾಕಿಸ್ತಾನ ಮೂಲದ ಲಷ್ಕರ್-ಎ-ತಯಬಾ ಭಯೋತ್ಪಾದಕರು ನಡೆಸಿದ 2008ರ ಮುಂಬೈ ದಾಳಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿಯನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಅಮೆರಿಕದ ನ್ಯಾಯಾಲಯವು ಈ ಹಿಂದೆ ತೀರ್ಪು ನೀಡಿತ್ತು.
64 ವರ್ಷದ ರಾಣಾ, ಈ ದಾಳಿಯ ಮತ್ತೊಬ್ಬ ಸಂಚುಕೋರ, ಅಮೆರಿಕ ನಾಗರಿಕ ಡೇವಿಡ್ ಕೊಲಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ಆಪ್ತನೂ ಹೌದು.
2008ರ ನವೆಂಬರ್ 26ರಂದು ಅರಬ್ಬಿ ಸಮುದ್ರದ ಮೂಲಕ ಮುಂಬೈ ಪ್ರವೇಶಿಸಿದ್ದ 10 ಮಂದಿ ಉಗ್ರರ ತಂಡ, ರೈಲು ನಿಲ್ದಾಣ, ಎರಡು ಐಷಾರಾಮಿ ಹೋಟೆಲ್ ಹಾಗೂ ಯಹೂದಿ ಕೇಂದ್ರದ ಮೇಲೆ ದಾಳಿ ನಡೆಸಿದ್ದರು. ಸುಮಾರು 60 ಗಂಟೆ ದಾಳಿ ನಡೆಸಿದ್ದ ಅವರು 166 ಮಂದಿಯನ್ನು ಕೊಂದು ಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.