ADVERTISEMENT

ಮಹಾರಾಷ್ಟ್ರದ ಅಭಿಮಾನ, ಘನತೆಗೆ ಧಕ್ಕೆ ತಂದ ರಾಣೆ: ಶಿವಸೇನಾ

ಪಿಟಿಐ
Published 26 ಆಗಸ್ಟ್ 2021, 10:07 IST
Last Updated 26 ಆಗಸ್ಟ್ 2021, 10:07 IST
ಶಿವಸೇನಾ
ಶಿವಸೇನಾ   

ಮುಂಬೈ: ಮಹಾರಾಷ್ಟ್ರದ ಅಭಿಮಾನ ಹಾಗೂ ಘನತೆಗೆ ಕೇಂದ್ರ ಸಚಿವ ನಾರಾಯಣ ರಾಣೆ ಧಕ್ಕೆ ತಂದಿದ್ದಾರೆ ಎಂದು ಶಿವಸೇನಾ ಆರೋಪಿಸಿದೆ.

ಪಕ್ಷದ ಮುಖವಾಣಿ 'ಸಾಮ್ನಾ' ಸಂಪಾದಕೀಯದಲ್ಲಿ ಈ ಕುರಿತು ಉಲ್ಲೇಖಿಸಿದ್ದು, ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ.ಕೇಂದ್ರ ಸಚಿವ ಸಂಪುಟದಲ್ಲಿ ನಾರಾಯಣ ರಾಣೆ ನಿರ್ಗಮನಕ್ಕೆ ದಿನಗಣನೆ ಆರಂಭವಾಗಿದೆ ಎಂದಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ನಾರಾಯಣ ರಾಣೆ ಅವರನ್ನು ಮಂಗಳವಾರ ಬಂಧಿಸಿ ತಡರಾತ್ರಿ ಜಾಮೀನು ನೀಡಲಾಗಿತ್ತು. ಇದು ಬಿಜೆಪಿ ಹಾಗೂ ಶಿವಸೇನಾ ನಾಯಕರ ನಡುವಣ ವಾಕ್ಸಮರಕ್ಕೆ ಕಾರಣವಾಗಿತ್ತು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿರುವುದರಿಂದ ಮಹಾರಾಷ್ಟ್ರಕ್ಕೆ ಕೇಂದ್ರದ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ರಾಣೆ ಹೇಳಿರುವುದಾಗಿ ಆರೋಪಿಸಿರುವ ಶಿವಸೇನಾ, ಮಹಾರಾಷ್ಟ್ರದ ಶತ್ರುಗಳು ಕೂಡಾ ರಾಣೆ ಅವರಂತೆ ರಾಜ್ಯವನ್ನು ದುರ್ಬಲಗೊಳಿಸುವುದಿಲ್ಲ ಎಂದು ಹೇಳಿದೆ.

ಕಾನೂನಿನ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಎಲ್ಲರಿಗೂ ಒಂದೇ ಆಗಿದೆ. ಅದು ಸಾಮಾನ್ಯ ಅಥವಾ ಅಸಾಮಾನ್ಯವ್ಯಕ್ತಿಯೇ ಆಗಿರಲಿ. ಕನಿಷ್ಠ ಪಕ್ಷ ರಾಜ್ಯದಲ್ಲಿ ಕಾನೂನು ಜಾರಿಯಲ್ಲಿದೆಯೇ ಎಂದು ಪ್ರಶ್ನಿಸಬಾರದು. ಯಾವನೇ ಒಬ್ಬ ವ್ಯಕ್ತಿ ಬೆದರಿಕೆ ಹಾಕಿದರೆ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸುತ್ತಾರೆ. ಬಳಿಕ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ರಾಣೆ ಪ್ರಕರಣದಲ್ಲೂ ಅದೇ ಆಗಿದೆ. ಆದ್ದರಿಂದ ರಾಜ್ಯದಲ್ಲಿ ತಾಲಿಬಾನಿ ಪಕ್ಷದ ಆಡಳಿತವಿದೆ ಎಂಬ ಬಿಜೆಪಿ ಹೇಳಿಕೆ ಆಧಾರರಹಿತ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.