ADVERTISEMENT

ತ್ರಿಪುರಾ | ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳ: ಅತ್ಯಾಚಾರ ಸಂತ್ರಸ್ತೆ ಆರೋಪ

ಪಿಟಿಐ
Published 18 ಫೆಬ್ರುವರಿ 2024, 13:16 IST
Last Updated 18 ಫೆಬ್ರುವರಿ 2024, 13:16 IST
-
-   

ಅಗರ್ತಲಾ: ತ್ರಿಪುರದ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ನ್ಯಾಯಾಧೀಶರೊಬ್ಬರು ತಮ್ಮ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅತ್ಯಾಚಾರ ಸಂತ್ರಸ್ತೆಯೊಬ್ಬರು ದೂರು ನೀಡಿದ್ದಾರೆ.

ಈ ಸಂಬಂಧ ಢಲಾಯ್ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಗೌತಮ್‌ ಸರ್ಕಾರ್‌ ನೇತೃತ್ವದ ತಿಸದಸ್ಯ ಸಮಿತಿ ತನಿಖೆ ನಡೆಸುತ್ತಿದೆ ಎಂದು ಹಿರಿಯ ವಕೀಲರೊಬ್ಬರು ಭಾನುವಾರ ತಿಳಿಸಿದ್ದಾರೆ.

ತಮ್ಮ ಮೇಲಿನ ಅತ್ಯಾಚಾರ ಪ್ರಕರಣದ ಕುರಿತು ಹೇಳಿಕೆ ದಾಖಲಿಸಲು ಢಲಾಯ್ ಜಿಲ್ಲೆಯ ಕಮಲಾಪುರ ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೊಠಡಿಗೆ ಫೆಬ್ರುವರಿ 16ರಂದು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ADVERTISEMENT

ಸಂತ್ರಸ್ತೆಯು ಈ ಸಂಬಂಧ ಕಮಲಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಿಗೆ ದೂರು ನೀಡಿದ್ದಾರೆ. 'ನನ್ನ ಹೇಳಿಕೆ ದಾಖಲಿಸಲು ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೊಠಡಿಗೆ ಫೆಬ್ರುವರಿ 16ರಂದು ಹೋಗಿದ್ದೆ. ಹೇಳಿಕೆ ನೀಡಲು ಆರಂಭಿಸುತ್ತಿದ್ದಂತೆ, ನ್ಯಾಯಾಧೀಶರು ನನ್ನನ್ನು ಹಿಡಿದುಕೊಂಡರು. ಕೂಡಲೇ ನಾನು ಅಲ್ಲಿಂದ ಹೊರಗೆ ಓಡಿದೆ. ಬಳಿಕ, ಅಲ್ಲಿದ್ದ ವಕೀಲರು ಮತ್ತು ನನ್ನ ಮತಿಗೆ ವಿಷಯ ತಿಳಿಸಿದೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮ್ಯಾಜಿಸ್ಟ್ರೇಟ್ ಸತ್ಯಜಿತ್ ದಾಸ್ ಅವರೊಂದಿಗೆ ಗೌತಮ್‌ ಸರ್ಕಾರ್ ಅವರು ಕಮಲ್‌ಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಗೆ ಭೇಟಿ ನೀಡಿ, ಪ್ರಕರಣದ ಕುರಿತು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮಹಿಳೆ ಪತಿಯೂ ಕಮಲಾಪುರ ಬಾರ್‌ ಅಸೋಸಿಯೇಷನ್‌ನಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.