ನವದೆಹಲಿ: ಕಟ್ಟಡ ತೆರವು ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡಿರುವ ‘ರ್‍ಯಾಟ್– ಹೋಲ್ ಮೈನರ್’ ವಕೀಲ್ ಹಾಸನ್ ಅವರು ದಿಲ್ಶಾನ್ ಗಾರ್ಡನ್‌ನಲ್ಲಿ ಮತ್ತೊಂದು ಮನೆ ನೀಡುವ ಅಧಿಕಾರಿಗಳ ಪ್ರಸ್ತಾವವನ್ನು ಶನಿವಾರ ತಿರಸ್ಕರಿಸಿದ್ದಾರೆ.
‘ನನ್ನನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ನಾಲ್ವರು ಸರ್ಕಾರಿ ಅಧಿಕಾರಿಗಳು ಶುಕ್ರವಾರ ರಾತ್ರಿ ಬಂದು ದಿಲ್ಶಾದ್ ಗಾರ್ಡನ್‌ನಲ್ಲಿ ಮನೆ ನೀಡಲು ಮುಂದಾದರು. ಆದರೆ ಅವರ ಬಳಿ ಈ ಕುರಿತು ಯಾವುದೇ ಲಿಖಿತ ಪ್ರಸ್ತಾವವೂ ಇರಲಿಲ್ಲ. ಅಲ್ಲದೆ ಅದು ಎನ್‌ಜಿಒಗೆ ಸೇರಿದ ಮನೆ. ಹೀಗಾಗಿ ಅದನ್ನು ನಾನು ನಿರಾಕರಿಸಿದೆ’ ಎಂದು ಹಾಸನ್ ಸುದ್ದಿ ಸಂಸ್ಥೆಗೆ ತಿಳಿಸಿದರು.
ಕಟ್ಟಡ ತೆರವಿನ ಕೆಲ ಗಂಟೆಗಳ ಬಳಿಕ ಅಧಿಕಾರಿಗಳು ನರೇಲಾದಲ್ಲಿನ ಇಡಬ್ಲ್ಯುಎಸ್ ಫ್ಲಾಟ್‌ಗೆ ತೆರಳಲು ಸೂಚಿಸಿದ್ದರು. ಆದರೆ ಅದು ಈಶಾನ್ಯ ದೆಹಲಿಯ ಖಜೂರಿ ಖಾಸ್‌ನಿಂದ ದೂರದಲ್ಲಿದೆ ಮತ್ತು ಅಸುರಕ್ಷಿತ ಎಂಬ ಕಾರಣಕ್ಕೆ ಅದನ್ನೂ ತಿರಿಸ್ಕರಿಸಿದ್ದೆ ಎಂದು ಅವರು ಹೇಳಿದರು.
‘ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ನೆಲಸಮಗೊಳಿಸಿದ ನನ್ನ ಮನೆಯ ಬೆಲೆ ₹ 1 ಕೋಟಿಯಷ್ಟಿದೆ. ಸರ್ಕಾರ ನೀಡುವ ಪರಿಹಾರವು ಅದಕ್ಕೆ ಸರಿಸಮನಾಗಿರಬೇಕು’ ಎಂದು ಅವರು ಪ್ರತಿಕ್ರಿಯಿಸಿದರು.
ಡಿಡಿಎ ಬುಧವಾರ ನಡೆಸಿದ ತೆರವು ಕಾರ್ಯಾಚರಣೆ ವೇಳೆ ಹಾಸನ್ ಅವರ ಮನೆಯನ್ನೂ ತೆರವುಗೊಳಿಸಲಾಯಿತು. ಹಲವು ವರ್ಷಗಳಿಂದ ಖಜೂರಿ ಖಾಸ್‌ನಲ್ಲಿ ಅವರ ಕುಟುಂಬ ನೆಲೆಸಿದೆ. ಮನೆ ಕಳೆದುಕೊಂಡಿರುವ ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಪಾದಚಾರಿ ಮಾರ್ಗದಲ್ಲಿ ಉಳಿದುಕೊಂಡಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಶನಿವಾರ ದೆಹಲಿಯಲ್ಲಿ ಮಳೆಯ ನಡುವೆಯೂ ಅವರು ತಮ್ಮ ಬೆಂಬಲಕ್ಕೆ ಧಾವಿಸುವಂತೆ ಜನರನ್ನು ವಿಡಿಯೊ ಮೂಲಕ ಕೋರಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತಂದ ‘ರ್‍ಯಾಟ್– ಹೋಲ್ ಮೈನರ್’ಗಳ ತಂಡದಲ್ಲಿ ಹಾಸನ್ ಅವರೂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.