ADVERTISEMENT

ಶರದ್‌ ಪವಾರ್ ಯುಪಿಎ ಮುನ್ನಡೆಸಲಿ: ಸಂಜಯ್ ರಾವುತ್‌

ಪಿಟಿಐ
Published 25 ಮಾರ್ಚ್ 2021, 10:11 IST
Last Updated 25 ಮಾರ್ಚ್ 2021, 10:11 IST
ಸಂಜಯ್ ರಾವತ್
ಸಂಜಯ್ ರಾವತ್   

ಮುಂಬೈ: ‘ಯುಪಿಎ ಮೈತ್ರಿಕೂಟ ನಿಸ್ತೇಜಗೊಂಡಿದ್ದು, ಶರದ್‌ ಪವಾರ್‌ರಂತಹ ಕಾಂಗ್ರೆಸ್ಸೇತರ ನಾಯಕರು ಆ ಒಕ್ಕೂಟವನ್ನು ಮುನ್ನಡೆಸುವ ಅಗತ್ಯವಿದೆ‘ ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್ ಹೇಳಿದರು.

ನವದೆಹಲಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯುಪಿಎ ಮೈತ್ರಿಕೂಟವನ್ನು ಮುನ್ನಡೆಸಲು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್ ಅವರು ರಾಷ್ಟ್ರಮಟ್ಟದಲ್ಲಿ ಇದರ ನೇತೃತ್ವವಹಿಸಿಕೊಳ್ಳಬೇಕು‘ ಎಂದು ಹೇಳಿದರು.

‘ಶರದ್‌ಪವಾರ್ ಯುಪಿಎ ನೇತೃತ್ವವಹಿಸಿಕೊಳ್ಳುವುದನ್ನು ಒಕ್ಕೂಟದಲ್ಲಿರುವ ಇತರೆ ಪಕ್ಷಗಳು ಬೆಂಬಲಿಸುತ್ತವೆಯೇ‘ ಎಂಬ ಪ್ರಶ್ನೆಗೆ ಉತ್ತರಿಸಿದ ರಾವುತ್‌, ‘ನಾವೆಲ್ಲ ಬಿಜೆಪಿ ವಿರೋಧಿಸುತ್ತಿರುವುದರಿಂದ, ಯಾವುದೇ ಪ್ರಾದೇಶಿಕ ಪಕ್ಷಗಳು ಪವಾರ್ ಅವರು ಯುಪಿಎ ಒಕ್ಕೂಟದ ನೇತೃತ್ವ ವಹಿಸುವುದನ್ನು ವಿರೋಧಿಸುತ್ತವೆ ಎಂದು ನನಗನ್ನಿಸುತ್ತಿಲ್ಲ‘ ಎಂದು ಹೇಳಿದರು.

ADVERTISEMENT

ರಾವುತ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ವಕ್ತಾರ ಸಚಿನ್ ಸಾವಂತ, ‘ಶಿವಸೇನಾ ಪಕ್ಷ ಯುಪಿಎ ಒಕ್ಕೂಟದ ಭಾಗವಾಗಿಲ್ಲ. ಒಂದೊಮ್ಮೆ ಯುಪಿಎಯ ಭಾಗವಾಗಿದ್ದರೆ ಅವರಿಗೆ ಅರ್ಥವಾಗುತ್ತಿತ್ತು. ರಾವುತ್ ಅವರು ಇಂಥ ಹೇಳಿಕೆಗಳಿಂದ ದೂರವಿರಬೇಕು‘ ಎಂದು ಹೇಳಿದರು.

‘ಶಿವಸೇನಾ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹೆಚ್ಚು ಸ್ಥಾನಗೊಳಿಸಿರುವುದರಿಂದ, ಆ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಆದರೂ ಶಿವಸೇನಾ, ಯುಪಿಎ ಮೈತ್ರಿಕೂಟದ ಭಾಗವಾಗಿಲ್ಲ. ಹಾಗಾಗಿ ರಾವುತ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ‘ ಎಂದು ಮತ್ತೊಬ್ಬ ಕಾಂಗ್ರೆಸ್‌ ಮುಖಂಡ ಮತ್ತು ರಾಜ್ಯಸಭೆ ಮಾಜಿ ಸದಸ್ಯ ಹುಸೇನ್ ದಳವಾಯಿ ಹೇಳಿದ್ದಾರೆ.

ಕಾಂಗ್ರೆಸ್‌ ಬೆಂಬಲ ನೀಡಿದ್ದರಿಂದ ಮಹಾರಾಷ್ಟ್ರ ವಿಕಾಸ ಆಘಾಡಿ ನೇತೃತ್ವದ ಸರ್ಕಾರ ರಚನೆ ಸಾಧ್ಯವಾಯಿತು ಎಂಬುದನ್ನು ರಾವುತ್ ಅವರು ಮರೆಯಬಾರದು. ಇಂಥ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸಬಾರದು ಎಂದು ದಳವಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.