ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಆರ್‌ಬಿಐನ 25ನೇ ಗವರ್ನರ್ ಆಗಿದ್ದ ಶಕ್ತಿಕಾಂತ ದಾಸ್ ಅವರು ಡಿ. 10ರಂದು ನಿವೃತ್ತರಾದರು. ಅವರ ಸ್ಥಾನಕ್ಕೆ ಸಂಜಯ್ ಮಲ್ಹೋತ್ರಾ ಅವರನ್ನು ಸರ್ಕಾರ ನೇಮಕ ಮಾಡಿತು.
ಇದೀಗ ಶಕ್ತಿಕಾಂತ ದಾಸ್ ಅವರನ್ನು ಪ್ರಧಾನಿ ಅವರ ಪ್ರಧಾನ ಕಾರ್ಯದರ್ಶಿ–2 ಹುದ್ದೆಗೆ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.
ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ–1 ಹುದ್ದೆಯಲ್ಲಿ ಸದ್ಯ ಪ್ರಮೋದ ಕುಮಾರ್ ಮಿಶ್ರಾ ಇದ್ದಾರೆ.
‘ಶಕ್ತಿಕಾಂತ ದಾಸ್ ಅವರ ಪ್ರಧಾನ ಕಾರ್ಯದರ್ಶಿ–2 ಅವಧಿ ತಕ್ಷಣದಿಂದಲೇ ಅನ್ವಯವಾಗಲಿದೆ. ಪ್ರಧಾನಿ ಅವರ ಅವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಇರಲಿದೆ’ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ತಮಿಳುನಾಡು ಕೇಡರ್ ಐಎಎಸ್ ಅಧಿಕಾರಿಯಾಗಿರುವ ದಾಸ್ ಅವರು 42 ವರ್ಷಗಳ ಅನುಭವ ಹೊಂದಿದ್ದಾರೆ. ಹಣಕಾಸು, ತೆರಿಗೆ, ಹೂಡಿಕೆ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ವಿಶೇಷ ಅನುಭವ ಹೊಂದಿದ್ದಾರೆ. ಆರ್‌ಬಿಐನ 25ನೇ ಗವರ್ನರ್ ಆಗಿಯೂ ಜವಾಬ್ದಾರಿ ನಿರ್ವಹಿಸಿದ್ದು, 15ನೇ ಹಣಕಾಸು ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.