ADVERTISEMENT

ಕೋವಿಡ್‌–19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೊರೊಕ್ವಿನ್‌ ಬಳಕೆ: ಹರ್ಷವರ್ಧನ್

ಪಿಟಿಐ
Published 15 ಸೆಪ್ಟೆಂಬರ್ 2020, 14:59 IST
Last Updated 15 ಸೆಪ್ಟೆಂಬರ್ 2020, 14:59 IST
ಹರ್ಷವರ್ಧನ್‌
ಹರ್ಷವರ್ಧನ್‌   

ನವದೆಹಲಿ: ಕೊರೊನಾ ಸೋಂಕಿನ ಪ್ರಾರಂಭಿಕ ಹಂತ ಮತ್ತು ಮಧ್ಯಮ ಹಂತದಲ್ಲಿ ರೋಗಿಗಳ ಚಿಕಿತ್ಸೆಗಾಗಿ ಹೈಡ್ರಾಕ್ಸಿಕ್ಲೊರೊಕ್ವಿನ್‌ ಔಷಧಿಯನ್ನು ಬಳಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ಈ ಕುರಿತ ದತ್ತಾಂಶವನ್ನು ಸಚಿವರು ಮುಂದಿಟ್ಟಿದ್ದು, ಔಷಧವಸ್ತುಗಳ ತಯಾರಿಕಾ ಇಲಾಖೆಯು ಹೈಡ್ರಾಕ್ಸಿಕ್ಲೊರೊಕ್ವಿನ್‌ ತಯಾರಿಕೆಯನ್ನು ಏರಿಸಿದೆ. ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೆ.11ರವರೆಗೆ 10.84 ಕೋಟಿ ಮಾತ್ರೆಗಳನ್ನು ಆರೋಗ್ಯ ಸಚಿವಾಲಯ ವಿತರಿಸಿದೆ ಎಂದರು.

‘140ಕ್ಕೂ ಅಧಿಕ ರಾಷ್ಟ್ರಗಳಿಗೆ ಈ ಮಾತ್ರೆಗಳನ್ನು ಭಾರತವು ರಫ್ತು ಮಾಡಿದೆ. ಕೊರೊನಾ ಸೋಂಕು ಅಂಟದಂತೆ ಆಯುರ್ವೇದ ಔಷಧಿಗಳಾದ ಅಶ್ವಗಂಧ, ಗುಡುಚಿ ಮುಂತಾದುವುಗಳ ಪ್ರಯೋಗದ ಬಗ್ಗೆಯೂ ಚಿಂತನೆ ಇದೆ. ಪ್ರಸ್ತುತ ಭಾರತದಲ್ಲಿ ಕೋವಿಡ್‌–19ಕ್ಕೆ 30ಕ್ಕೂ ಅಧಿಕ ಸಂಭಾವ್ಯ ಲಸಿಕೆಗಳ ಪ್ರಯೋಗ ನಡೆಯುತ್ತಿದ್ದು, ಈ ಪೈಕಿ ಮೂರು ಲಸಿಕೆಗಳು ಎರಡು ಮತ್ತು ಮೂರನೇ ಹಂತದಲ್ಲಿವೆ. ನಾಲ್ಕು ಲಸಿಕೆಗಳು ಅಡ್ವಾನ್ಸ್‌ಡ್ ಪ್ರಿ–ಕ್ಲಿನಿಕಲ್‌ ಅಭಿವೃದ್ಧಿ ಹಂತದಲ್ಲಿವೆ’ ಎಂದು ಹೇಳಿದರು.

ADVERTISEMENT

38 ಸಾವಿರ ಸಾವನ್ನು ತಪ್ಪಿಸಿದ್ದೇವೆ: ‘ಸರ್ಕಾರವು ರಾಷ್ಟ್ರದಾದ್ಯಂತ ಲಾಕ್‌ಡೌನ್‌ ನಿಯಮ ಜಾರಿಗೆ ತಂದ ಕಾರಣ, ಪಿಡುಗಿನಿಂದಾಗಿ ಸಂಭವಿಸಬಹುದಾಗಿದ್ದ 38 ಸಾವಿರ ಸಾವು ಹಾಗೂ 29 ಲಕ್ಷ ಕೋವಿಡ್‌–19 ಪ್ರಕರಣಗಳನ್ನು ತಡೆದಿದ್ದೇವೆ’ ಎಂದು ಹರ್ಷವರ್ಧನ್‌ ತಿಳಿಸಿದರು.

‘ಸೆ.11ರವರೆಗೆ 60,948 ವೆಂಟಿಲೇಟರ್‌ಗಳ ಖರೀದಿಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ವಿವಿಧ ರಾಜ್ಯಗಳಿಗೆ 30,170 ವೆಂಟಿಲೇಟರ್‌ಗಳನ್ನು ನೀಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.