ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರೋತ್ಸವ ಭಾಷಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ಹೊಗಳಿದ್ದಕ್ಕೆ ವಿರೋಧ ಪಕ್ಷಗಳು ಟೀಕಿಸಿವೆ. ಬಿಜೆಪಿಯು ಪ್ರಧಾನಿ ಅವರನ್ನು ಸಮರ್ಥಿಸಿಕೊಂಡಿದೆ.
ಪ್ರಧಾನಿ ಅವರು ಆರ್‌ಎಸ್‌ಎಸ್‌ಅನ್ನು ಹೊಗಳುವ ಮೂಲಕ ಅಧಿಕಾರದಲ್ಲಿ ಉಳಿಯಲು ಹತಾಶ ಪ್ರಯತ್ನ ನಡೆಸಿದ್ದಾರೆ. ಈ ಮೂಲಕ ಹುತಾತ್ಮರು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತೋರಿದ್ದಾರೆ ಎಂದು ಕಾಂಗ್ರೆಸ್ ಶುಕ್ರವಾರ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು, ‘ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಆರ್‌ಎಸ್‌ಎಸ್ ಹೆಸರು ಉಲ್ಲೇಖಿಸಿದ್ದು, ಸಾಂವಿಧಾನಿಕ ಮತ್ತು ಜಾತ್ಯತೀತ ಗಣತಂತ್ರ ವ್ಯವಸ್ಥೆಗೆ ಮಾಡಿದ ಅಪಮಾನ’ ಎಂದು ಹೇಳಿದರು.
‘ಮುಂದಿನ ತಿಂಗಳು ಮೋದಿ ಅವರು 75 ವರ್ಷಕ್ಕೆ ಕಾಲಿಡಲಿದ್ದಾರೆ. ಆರ್‌ಎಸ್‌ಎಸ್ ಓಲೈಕೆ ಮಾಡುವ ಉದ್ದೇಶದಿಂದ ಈ ಹತಾಶ ಪ್ರಯತ್ನ ನಡೆಸಿದ್ದಾರಲ್ಲದೆ ಮತ್ತೇನೂ ಅಲ್ಲ’ ಎಂದರು.
‘ಸೆಪ್ಟೆಂಬರ್ ನಂತರವೂ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಸಲಿ ಎಂಬ ಉದ್ದೇಶದಿಂದ ಅವರು ಆರ್‌ಎಸ್‌ಎಸ್ ಕೃಪಾಕಟಾಕ್ಷದ ನಿರೀಕ್ಷೆಯಲ್ಲಿದ್ದಾರೆ. ಇಂದು ಅವರು ಬಳಲಿದಂತಿದ್ದರು. ಶೀಘ್ರವೇ ಅವರು ನಿವೃತ್ತಿ ಪಡೆಯಲಿದ್ದಾರೆ’ ಎಂದು ವ್ಯಂಗ್ಯವಾಡಿದರು.
75 ವರ್ಷ ತುಂಬಿದವರು ಕಿರಿಯ ನಾಯಕರಿಗೆ ಅವಕಾಶ ನೀಡಬೇಕು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಜೈರಾಮ್ ಅವರು ಪ್ರಧಾನಿ ಅವರನ್ನು ಟೀಕಿಸಿದರು.
ಬಿಜೆಪಿ ಸಮರ್ಥನೆ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಅವರು ಆರ್‌ಎಸ್‌ಎಸ್‌ಅನ್ನು ಶ್ಲಾಘಿಸಿರುವುದನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ‘ಆರ್‌ಎಸ್‌ಎಸ್ 100 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಿಂದ ಆ ಸಂಘಟನೆಯ ಬಗ್ಗೆ ಪ್ರಸ್ತಾಪಿಸಿರುವುದು ಸೂಕ್ತವಾಗಿಯೇ ಇದೆ’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.
ಸ್ವಾತಂತ್ರ್ಯೋತ್ಸವ ದಿನದ ಭಾಷಣವು ಇತಿಹಾಸ ತಿರುಚುವ ಅಥವಾ ಬಾಯಿಗೆ ಬಂದಂತೆ ಮಾತನಾಡುವ ಕಾರ್ಯಕ್ರಮ ಅಲ್ಲಮನೋಜ್ ಝಾ ಆರ್‌ಜೆಡಿ ಸಂಸದ
ಆರ್‌ಎಸ್‌ಎಸ್ ವೈಭವೀಕರಣ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅಪಮಾನ. ಆರ್‌ಎಸ್‌ಎಸ್ ಬ್ರಿಟಿಷರ ಸೇವೆ ಸಲ್ಲಿಸಿತ್ತು. ಸ್ವಾತಂತ್ರ್ಯಕ್ಕಾಗಿ ಎಂದಿಗೂ ಹೋರಾಟಗಾರರೊಂದಿಗೆ ಕೈಜೋಡಿಸಿಲ್ಲಅಸಾದುದ್ದೀನ್ ಓವೈಸಿ ಎಐಎಂಐಎಂ ಅಧ್ಯಕ್ಷ
ಕೋಮು ಗಲಭೆ ಪ್ರಚೋದಿಸುವಲ್ಲಿ ಆರ್‌ಎಸ್‌ಎಸ್ ಪಾತ್ರ ಏನು ಎಂದು ಇತಿಹಾಸಕಾರರು ಬರೆದಿಟ್ಟಿದ್ದಾರೆ. ಗಾಂಧೀಜಿ ಹತ್ಯೆ ಬಳಿಕ ಆರ್‌ಎಸ್‌ಎಸ್‌ಅನ್ನು ನಿಷೇಧಿಸಲಾಗಿತ್ತು. ಪ್ರಧಾನಿ ಆರ್‌ಎಸ್‌ಎಸ್ ಹೊಗಳಿದ್ದು ನಾಚಿಕೆಗೇಡುಎಂ.ಎ.ಬೇಬಿ ಸಿಪಿಎಂ ಪ್ರಧಾನ ಕಾರ್ಯದರ್ಶಿ
‘ವಿಶ್ವದ ಅತಿದೊಡ್ಡ ಎನ್‌ಜಿಒ’:
ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣವನ್ನು ‘ಅತ್ಯಂತ ಹೆಮ್ಮೆಯದ್ದು ಮತ್ತು ಅದ್ಭುತವಾದುದು’ ಎಂದು ಬಣ್ಣಿಸಿದ್ದಾರೆ. ಸಂಘವು ರಾಷ್ಟ್ರನಿರ್ಮಾಣಕ್ಕೆ ನೀಡಿದ ಕೊಡುಗೆಗಳಿಗಾಗಿ ಅದರ ಎಲ್ಲ ಸ್ವಯಂಸೇವಕರನ್ನು ಶ್ಲಾಘಿಸಿದ್ದಾರೆ. ‘ನಾನು ಬಹಳ ಹೆಮ್ಮೆಯಿಂದ ಒಂದು ವಿಷಯವನ್ನು ಉಲ್ಲೇಖಿಸಲು ಬಯಸುತ್ತೇನೆ. ಆರ್‌ಎಸ್‌ಎಸ್ ಹೆಸರಿನ ಸಂಘಟನೆ 100 ವರ್ಷಗಳ ಹಿಂದೆ ಹುಟ್ಟಿಕೊಂಡಿತು. ಈ 100 ವರ್ಷಗಳಲ್ಲಿ ರಾಷ್ಟ್ರ ಸೇವೆಗೆ ಕೊಡುಗೆ ನೀಡಿದ ಎಲ್ಲಾ ಸ್ವಯಂಸೇವಕರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ’ ಎಂದರು. ‘ಸೇವೆ ಸಮರ್ಪಣೆ ಸಂಘಟನೆ ಮತ್ತು ಶಿಸ್ತು... ಆರ್‌ಎಸ್‌ಎಸ್‌ನ ಗುರುತು. ಈ ಸಂಘಟನೆಯು ಒಂದು ರೀತಿಯಲ್ಲಿ ವಿಶ್ವದ ಅತಿದೊಡ್ಡ ಎನ್‌ಜಿಒ’ ಎಂದು ಬಣ್ಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.