ADVERTISEMENT

ಉತ್ತರ ಪ್ರದೇಶ ಚುನಾವಣೆ: ಪಕ್ಷ ಬಯಸಿದರೆ ಸ್ಪರ್ಧೆ ಎಂದ ಯೋಗಿ ಆದಿತ್ಯನಾಥ

ಪಿಟಿಐ
Published 2 ಜನವರಿ 2022, 18:44 IST
Last Updated 2 ಜನವರಿ 2022, 18:44 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಲಖನೌ: ಈ ಬಾರಿಯ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸ್ಪರ್ಧಿಸಲಿದ್ದಾರೆಯೇ ಎಂಬ ಕುರಿತು ಇನ್ನೂ ಯಾವ ಸ್ಪಷ್ಟ ಮಾಹಿತಿ ದೊರಕಿಲ್ಲ. ಆದರೆ, ಪಕ್ಷದ ನಾಯಕತ್ವ ಬಯಸಿದರೆ ತಾವು ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಯೋಗಿ ಆದಿತ್ಯನಾಥ ಶನಿವಾರ ಹೇಳಿದ್ದಾರೆ. ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷದ ನಾಯಕತ್ವ ನಿರ್ಧರಿಸಲಿದೆ ಎಂದಿದ್ದಾರೆ.

ಯೋಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಮತದಾರರಿಗೆ ಧನಾತ್ಮಕ ಸಂದೇಶ ರವಾನಿಸಿದಂತಾಗುತ್ತದೆ ಎಂದು ಉತ್ತರ ಪ್ರದೇಶ ಬಿಜೆಪಿಯ ಒಂದು ವರ್ಗ ಭಾವಿಸಿದೆ. ‘ಆದಿತ್ಯನಾಥ ಅವರು ಉತ್ತರ ಪ್ರದೇಶ ಬಿಜೆಪಿಯ ಪ್ರಮುಖ ನಾಯಕ. ಚುನಾವಣಾ ಕಣದಲ್ಲಿ ಅವರ ಇರುವಿಕೆಯಿಂದ ಪಕ್ಷದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಉತ್ತಮ ಸಂದೇಶ ರವಾನೆ ಆಗುತ್ತದೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಪ್ರಜಾವಾಣಿಗೆ ಹೇಳಿದ್ದಾರೆ.

ಆದರೆ ಬಿಜೆಪಿಯ ಮತ್ತೊಂದು ವರ್ಗ ಯೋಗಿ ಅವರ ಸ್ಪರ್ಧೆಯನ್ನು ವಿರೋಧಿಸಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ಆದಿತ್ಯನಾಥರೇ ಉತ್ತರ ಪ್ರದೇಶದ ಜನಪ್ರಿಯ ನಾಯಕ. ಪಕ್ಷದಿಂದ ಸ್ಪರ್ಧಿಸುತ್ತಿರುವ ಎಲ್ಲರ ಪರವಾಗಿ ಅವರು ಪ್ರಚಾರ ನಡೆಸುವ ಅಗತ್ಯವಿದೆ. ಅವರೇ ಸ್ಪರ್ಧಾ ಕಣದಲ್ಲಿ ಇದ್ದರೆ ಚುನಾವಣಾ ಪ್ರಚಾರಕ್ಕೆ ತೊಂದರೆ ಆಗುತ್ತದೆ’ ಎಂದು ಮತ್ತೊಬ್ಬ ಮುಖಂಡ ಹೇಳಿದ್ದಾರೆ.

ಸ್ಪರ್ಧೆ ಕುರಿತ ನಿರ್ಧಾರವನ್ನು ಆದಿತ್ಯನಾಥ ಅವರಿಗೇ ಬಿಡುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ. ತಮ್ಮ ಲೋಕಸಭಾ ಕ್ಷೇತ್ರ ಗೋರಖಪುರ ಅಥವಾ ಅಯೋಧ್ಯೆಯಿಂದ ಅವರು ಸ್ಪರ್ಧಿಸಬಹುದು ಎಂಬ ಮಾತುಗಳೂ ಕೇಳಿಬಂದಿವೆ.

ಯೋಗಿ ಅವರು ಸದ್ಯ ಉತ್ತರ ಪ್ರದೇಶ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.