ADVERTISEMENT

ಜನಸಾಮಾನ್ಯರ ನಿಜವಾದ ಸಮಸ್ಯೆ ನಿರ್ಲಕ್ಷ್ಯ: ಕೇಂದ್ರದ ವಿರುದ್ಧ ಕನ್ಹಯ್ಯಾ ಟೀಕೆ

ಪಿಟಿಐ
Published 6 ಡಿಸೆಂಬರ್ 2022, 11:34 IST
Last Updated 6 ಡಿಸೆಂಬರ್ 2022, 11:34 IST
ಕನ್ಹಯ್ಯಾ ಕುಮಾರ್‌
ಕನ್ಹಯ್ಯಾ ಕುಮಾರ್‌   

ಝಾಲಾವರ್‌, ರಾಜಸ್ಥಾನ: ‘ಈಗ ಮೋದಿ, ಮೋದಿಎಂದು ಕೂಗುವ ಜನರೇ ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗುವ ದಿನ ದೂರವಿಲ್ಲ. ಉದ್ಯೋಗ, ಆಹಾರ, ನೀರಿಗೆ ಸಂಬಂಧಿಸಿದ ಜನಸಾಮಾನ್ಯರ ನೈಜ ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ’ ಎಂದು ಕಾಂಗ್ರೆಸ್‌ ನಾಯಕ ಕನ್ಹಯ್ಯಾ ಕುಮಾರ್‌ ಆರೋಪಿಸಿದರು.

ಝಾಲಾವರ್‌ನಲ್ಲಿ ನಡೆಯುತ್ತಿರುವ ಭಾರತ್‌ ಜೋಡೊ ಯಾತ್ರೆ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಇಬ್ಬಗೆಯ ನೀತಿ ಅನುಸರಿಸುತ್ತಿದೆ. ಭಾರತ್‌ ಜೋಡೊ ಯಾತ್ರೆಯಲ್ಲಿ ಮಕ್ಕಳು ಪಾಲ್ಗೊಂಡರೆ ಅದು (ಬಿಜೆಪಿ) ದೂರು ನೀಡುತ್ತದೆ. ಆದರೆ, ಗುಜರಾತ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿಯವರು ಮಕ್ಕಳನ್ನು ಬಳಸಿಕೊಂಡಿದ್ದಾರೆ ಎಂದು ಹೇಳಿದರೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದರು.

ಯುವಕನೊಬ್ಬ ಮನೆಯೊಂದರ ಮೇಲ್ಛಾವಣಿಯಿಂದ ಮೋದಿ ಪರ ಘೋಷಣೆ ಕೂಗುತ್ತಿರುವ ವಿಡಿಯೊವೊಂದನ್ನು ಉಲ್ಲೇಖಿಸಿ, ‘ಬೆಲೆ ಏರಿಕೆ ವಿರುದ್ಧ ಘೋಷಣೆ ಕೂಗುವ ದಿನ ದೂರವಿಲ್ಲ. ಆ ದಿನ ಬರುತ್ತದೆಂಬ ನಂಬಿಕೆ ನನಗಿದೆ’ ಎಂದು ಅವರು ಹೇಳಿದರು.

ADVERTISEMENT

‘ಗುಜರಾತ್‌ನಲ್ಲಿ ಇಷ್ಟು ವರ್ಷಗಳವರೆಗೆ ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು ಪಕ್ಷ ಹೇಳುತ್ತದೆ. ಹಾಗಿದ್ದರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳನ್ನುಚುನಾವಣಾ ಪ್ರಚಾರಕ್ಕಾಗಿ ಏಕೆ ಕರೆಸಬೇಕಿತ್ತು’ ಎಂದು ಕನ್ಹಯ್ಯಾ ಅವರು ಪ್ರಶ್ನಿಸಿದರು.

‘ಒಂದು ವೇಳೆಅವರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೆ, ಅದರ ಆಧಾರದ ಮೇಲೆ ಏಕೆ ಚುನಾವಣೆಯನ್ನು ಎದುರಿಸುತ್ತಿಲ್ಲ. ಗುಜರಾತ್‌ನ 50ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿರುವುದು ಬಿಜೆಪಿ ಯಾವುದೇ ಕೆಲಸಗಳನ್ನು ಮಾಡಿಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ತಿಳಿಸಿದರು.

ಅಲ್ಲದೇ, ‘ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದವರು ವೇದಿಕೆಯಲ್ಲಿ ಬೆದರಿಕೆ ಮತ್ತು ಹಿಂಸಾಚಾರದ ಭಾಷೆಯನ್ನು ಬಳಸಿದ್ದು ನೋವಿನ ಸಂಗತಿ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.