ADVERTISEMENT

ಉಟ್ಟ ಬಟ್ಟೆಯಲ್ಲೇ ಸೂರತ್‌ಗೆ ಹೋಗಿದ್ದೆವು: ಶಿವಸೇನಾ ಬಂಡಾಯ ಶಾಸಕ

ಪಿಟಿಐ
Published 7 ಜುಲೈ 2022, 16:21 IST
Last Updated 7 ಜುಲೈ 2022, 16:21 IST
ಸಂಜಯ್‌ ಶಿರಸಾಟ್‌
ಸಂಜಯ್‌ ಶಿರಸಾಟ್‌   

ಔರಂಗಬಾದ್‌: ಹೆಚ್ಚುವರಿ ಬಟ್ಟೆ, ಲಗ್ಗೇಜ್‌ ಏನನ್ನೂ ತೆಗೆದುಕೊಳ್ಳದೆ ಉಟ್ಟ ಬಟ್ಟೆಯಲ್ಲೇ ಸೂರತ್‌ಗೆ ಹೋಗಿದ್ದೆವು. ಹೋಟೆಲ್‌ಗೆ ಹೋದ ಬಳಿಕ ಹೊಸ ಬಟ್ಟೆಗಳು ಸಿಕ್ಕಿದವು ಎಂದು ಶಿವಸೇನಾದ ಬಂಡಾಯ ಶಾಸಕ ಸಂಜಯ್‌ ಶಿರಸಾಟ್‌ ಹೇಳಿದ್ದಾರೆ.

ಏಕನಾಥ ಶಿಂಧೆ, ಈಗಿನ ಮಹಾರಾಷ್ಟ್ರ ಮುಖ್ಯಮಂತ್ರಿ, ಅವರ ನೇತೃತ್ವದಲ್ಲಿ ಅಂದಿನ ಸಿಎಂ ಉದ್ಧವ್‌ ಠಾಕ್ರೆ ಅವರ ನೇತೃತ್ವದ ಮಹಾ ವಿಕಾಸ್‌ ಆಘಾಡಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಸೂರತ್‌ಗೆ ಪ್ರಯಾಣ ಬೆಳೆಸಿದ್ದರ ಬಗ್ಗೆ ಶಿರಸಾಟ್‌ ಮಾತನಾಡಿದ್ದಾರೆ. ಆರಂಭದಲ್ಲಿ ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ಅರಿವೂ ಇರಲಿಲ್ಲ ಎಂದಿದ್ದಾರೆ.

ಏಕನಾಥ ಶಿಂಧೆ ಅವರ ಕರೆಯ ಮೇರೆಗೆ ಏಕಾಏಕಿ ಹೊರಟೆವು. ಉಟ್ಟ ಬಟ್ಟೆಯಲ್ಲೇ ಬಂದಿರುವ ವಿಚಾರವನ್ನು ಅವರಿಗೆ ತಿಳಿಸಿದೆವು. ಅಚ್ಚರಿ ಎಂಬಂತೆ ಮರುದಿನ ಹೋಟೆಲ್‌ಗೆ ಗಾಡಿ ತುಂಬ ಹೊಸ ಬಟ್ಟೆಗಳು ಬಂದವು. ಬಟ್ಟೆಯ ಮಳಿಗೆಯೇ ಹೋಟೆಲ್‌ಗೆ ಬಂದಂತಿತ್ತು. ಎಲ್ಲರೂ ಅವರವರಿಗೆ ಇಷ್ಟವಾದ ಬಟ್ಟೆಗಳನ್ನು ಆಯ್ಕೆ ಮಾಡಿಕೊಂಡೆವು. ಶಿಂಧೆ ಅವರಿಗೆ ಅವರ ಆಯ್ಕೆಯ ಬಟ್ಟೆಗಳು ಸಿಗಲಿಲ್ಲ. ಕೊನೆಗೆ ಶಿಂಧೆ ಅವರ ಸ್ವಕ್ಷೇತ್ರ ಥಾಣೆಯಿಂದಲೇ ಬಟ್ಟೆಗಳನ್ನು ತರಿಸಲಾಯಿತು ಎಂದು ಶಿರಸಾಟ್‌ ವಿವರಿಸಿದ್ದಾರೆ.

ADVERTISEMENT

ಜೂನ್‌ 21ರಂದು ಸೂರತ್‌ ತಲುಪಿದ್ದ ಬಂಡಾಯ ಶಾಸಕರು ಅಲ್ಲಿನ ಐಷಾರಾಮಿ ಹೋಟೆಲ್‌ನಲ್ಲಿ ನೆಲೆಸಿದ್ದರು. ಬಳಿಕ ಪ್ರವಾಹ ಪೀಡಿತ ಅಸ್ಸಾಂನ ಗುವಾಹಟಿಗೆ ತೆರಳಿ, ಅಲ್ಲಿನ ಐಷಾರಾಮಿ ಹೋಟೆಲ್‌ನಲ್ಲಿ ನೆಲೆಸಿದ್ದರು. ಅಂತಿಮವಾಗಿ ಜೂನ್‌ 30ರಂದು ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಏಕನಾಥ ಶಿಂಧೆ ಅವರು ಮುಖ್ಯಮಂತ್ರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.